ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ, ಮತದಾನ ಮುಗಿದ ದಿನವೇ ವಿದೇಶಕ್ಕೆ ತೆರಳಿದ್ದರು. ಅಲ್ಲಿಗೆ ಹೋಗುವ ಸಂದರ್ಭದಲ್ಲಿ ರಿಟರ್ನ್ ಟಿಕೆಟ್ ಮಾಡಿಸಿದ್ದರೂ ಕೂಡ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಪ್ರಯಾಣವನ್ನು ರದ್ದುಗೊಳಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ಐಟಿ ತಂಡ, ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿತ್ತು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪ್ರಜ್ವಲ್ ರೇವಣ್ಣನವರ ರಾಜ ತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸುವಂತೆ ಮನವಿ ಮಾಡಿದ್ದರು.
ಇದರ ಮಧ್ಯೆ ವಿದೇಶದಿಂದಲೇ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ್ದ ಪ್ರಜ್ವಲ್ ರೇವಣ್ಣ, ತಾವು ಶೀಘ್ರದಲ್ಲಿಯೇ ವಾಪಸ್ಸಾಗಲಿದ್ದು ಎಸ್ಐಟಿ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದರು. ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ಇದರ ಮೂಲ ಪತ್ತೆ ಹಚ್ಚಲು ಎಸ್ಐಟಿ ತಂಡ ಮುಂದಾಗಿತ್ತು.
ವಿಡಿಯೋ ಬಿಡುಗಡೆಯಾದ ಐಪಿ ಅಡ್ರೆಸ್ ಜಾಡು ಹಿಡಿದ ಎಸ್ಐಟಿ ತಂಡಕ್ಕೆ ಈ ವಿಡಿಯೋ ಹಂಗೇರಿಯ ಬುಡಾಪೆಸ್ಟ್ ನಿಂದ ಬಿಡುಗಡೆ ಮಾಡಿರುವ ವಿಚಾರ ತಿಳಿದು ಬಂದಿದೆ. ಆದರೆ ವಿಡಿಯೋವನ್ನು ಸ್ವತಃ ಪ್ರಜ್ವಲ್ ರೇವಣ್ಣ ಬಿಡುಗಡೆಗೊಳಿಸಿದ್ದಾರೋ ಅಥವಾ ಅವರ ಸ್ನೇಹಿತರು ಈ ಕೆಲಸ ಮಾಡಿದ್ದಾರೋ ಎಂಬುದು ಖಚಿತವಾಗಿಲ್ಲ.