ಹಿಂದಿನ ಕಾಲದಲ್ಲಿ ಮುಟ್ಟಿನ ಬಗ್ಗೆ, ಸೆಕ್ಸ್ ಬಗ್ಗೆ ಮಕ್ಕಳಿಗೆ ಹೇಳುತ್ತಿರಲಿಲ್ಲ. ಇದೆಲ್ಲವೂ ತಿಳಿದ್ರೆ ಮಕ್ಕಳು ಸಮಯಕ್ಕಿಂತ ಮೊದಲೇ ದೊಡ್ಡವರಾಗ್ತಾರೆ ಎಂಬ ನಂಬಿಕೆಯಿತ್ತು. ಆಗಿನ ಮಕ್ಕಳೂ ಹಾಗೆ ಇದ್ರು. ವಯಸ್ಸು ಹೆಚ್ಚಾಗುತ್ತಿದ್ದಂತೆ ಆಯಾ ವಯಸ್ಸಿನಲ್ಲಿ ದೇಹದಲ್ಲಿ ಯಾವ ಬದಲಾವಣೆ ಆಗುತ್ತದೆ ಎಂಬುದು ಅವ್ರ ಅನುಭವಕ್ಕೆ ಬರುತ್ತಿತ್ತು.
ಕಾಲ ಬದಲಾಗಿದೆ. ಈಗಿನ ಮಕ್ಕಳು ಹಿಂದಿನ ಮಕ್ಕಳಂತಿಲ್ಲ. ಅವ್ರ ಸುತ್ತಮುತ್ತಲ ಪರಿಸರ ಅವ್ರನ್ನು ಬುದ್ಧಿವಂತರನ್ನಾಗಿ ಹಾಗೂ ಬಹುಬೇಗ ದೊಡ್ಡವರನ್ನಾಗಿ ಮಾಡ್ತಿದೆ. ಹಾಗಾಗಿ ಪಾಲಕರಾದವರು ಮಕ್ಕಳಿಗೆ ಮುಟ್ಟು ಹಾಗೂ ಸಂಭೋಗದ ಬಗ್ಗೆ ಹೇಳಬೇಕಾಗುತ್ತದೆ. ಕುತೂಹಲಕ್ಕೆ ಬಿದ್ದು ದಾರಿ ತಪ್ಪುವ ಮೊದಲು ಪಾಲಕರು ಹಿಂಜರಿಕೆ ಬಿಟ್ಟು ಹೇಳಬೇಕು. ಇದು ಮಕ್ಕಳಿಗೂ ಒಳ್ಳೆಯದು.
ಸಾಮಾನ್ಯವಾಗಿ ಮುಟ್ಟಿನ ಬಗ್ಗೆ ಮಕ್ಕಳಿಗೆ 10ನೇ ವರ್ಷವಾಗ್ತಿದ್ದಂತೆ ಹೇಳುವುದು ಒಳ್ಳೆಯದು. ಈ ವಯಸ್ಸಿನಲ್ಲಿ ಮಕ್ಕಳು ನೀವು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಬಲ್ಲವರಾಗುತ್ತಾರೆ. ಬಹುತೇಕ ತಾಯಂದಿರು ಹೆಣ್ಣು ಮಕ್ಕಳಿಗೆ ಮಾತ್ರ ಮುಟ್ಟಿನ ಬಗ್ಗೆ ಹೇಳ್ತಾರೆ. ಇದು ತಪ್ಪು. ಗಂಡು ಮಕ್ಕಳಿಗೂ ಮುಟ್ಟಿನ ಬಗ್ಗೆ ಮಾಹಿತಿ ನೀಡಬೇಕು.