ಅತ್ಯಧಿಕ ಕ್ಯಾಲ್ಷಿಯಂ ಹೊಂದಿರುವ ಸಿರಿಧಾನ್ಯ ರಾಗಿ. ರಾಗಿ ತಿನ್ನುವವ ನಿರೋಗಿ ಅನ್ನೋ ಮಾತಿದೆ. ರಾಗಿ ಮಧುಮೇಹದಿಂದ ಬಳಲುವ ಮಂದಿಗೂ ಉತ್ತಮ ಆಹಾರ. ಇದು ಅನ್ನದ ಹಾಗೆ ಬಹಳ ಬೇಗ ಜೀರ್ಣವಾಗಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ರಾಗಿಯನ್ನು ಯಾವುದೇ ರೂಪದಲ್ಲಿ ಆಹಾರವಾಗಿ ಸೇವಿಸಿದರೂ ಅದು ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದರಲ್ಲಿ ಸಹಕಾರಿ.
ಇನ್ನೇನು ಮಧುಮೇಹ ಬಂದೇಬಿಡ್ತು ಅನ್ನೋವಾಗ ಅನೇಕರು ರಾಗಿ ಮುದ್ದೆ ತಿನ್ನೋಕೆ ಶುರು ಮಾಡ್ತಾರೆ. ಕೇವಲ ತಿನ್ನೋದಕ್ಕಷ್ಟೆ ಅಲ್ಲ, ರಾಗಿ ಮುದ್ದೆ ತಯಾರಿಸೋದು ಹೇಗೆ ಅಂತ ಅನೇಕ ವೀಡಿಯೋಗಳನ್ನ ಜಾಲಾಡೋದನ್ನ ಗಮನಿಸಬಹುದು.
ಆದರೆ ರಾಗಿ ಮುದ್ದೆ ಮಾಡೋದು ನೀವು ಅಂದುಕೊಂಡಷ್ಟು ಕಷ್ಟ ಏನಲ್ಲ. ಸುಲಭವಾಗಿ ಕೆಲವೇ ಹಂತಗಳಲ್ಲಿ ರಾಗಿ ಮುದ್ದೆ ಮಾಡೋದು ಹೇಗೆ ಅನ್ನೋ ವಿವರ ಇಲ್ಲಿದೆ.
ಹೊಸದಾಗಿ ರಾಗಿ ಮುದ್ದೆ ಮಾಡೋರು ಬಾಣಲೆಯನ್ನು ಆಯ್ಕೆ ಮಾಡಿಕೊಳ್ಳೋದು ಬೆಸ್ಟ್. ಬಾಣಲೆ ಬೇಡ ಅಂದರೆ ಅಗಲ ಬಾಯಿಯ, ಸ್ವಲ್ಪ ದಪ್ಪ ತಳದ ಪಾತ್ರೆ ಇಟ್ಕೊಳ್ಳೋದು ಒಳ್ಳೇದು.
*ಒಂದೂ ಕಾಲು ಲೋಟ ನೀರನ್ನ ಬಾಣಲೆಗೆ ಹಾಕಿ ಕುದಿಯೋಕೆ ಬಿಡಬೇಕು.
*ನೀರು ಕುದಿಯೋಕೆ ಶುರುವಾದಾಗ ನಾಲ್ಕೈದು ಹನಿ ಅಡುಗೆ ಎಣ್ಣೆ ಹಾಕಿ. ಹೀಗೆ ಮಾಡೋದ್ರಿಂದ ತಳದಲ್ಲಿ ಹೆಚ್ಚು ಹಿಟ್ಟು ಅಂಟಿಕೊಳ್ಳುವುದಿಲ್ಲ.
* ಎರಡು ಚಮಚ ರಾಗಿ ಹಿಟ್ಟಿಗೆ ತಣ್ಣೀರು ಬೆರೆಸಿ ಪೇಸ್ಟ್ ತಯಾರಿಸಿ ಇದನ್ನು ಕುದಿಯುವ ನೀರಿಗೆ ಹಾಕಿ ಚೆನ್ನಾಗಿ ಕದಡಿ.
* ಈಗ ಒಂದು ಲೋಟ ರಾಗಿ ಹಿಟ್ಟನ್ನು ಕುದಿಯುವ ನೀರಿನ ಮದ್ಯ ಭಾಗದಲ್ಲಿ ಸುರಿದು ಸಣ್ಣ ಉರಿಯಲ್ಲಿ ಬೇಯಿಸಿ. ( ಒಂದೂ ಕಾಲು ಲೋಟ ನೀರಿಗೆ ಅದೇ ಅಳತೆಯಲ್ಲಿ ಒಂದು ಲೋಟ ರಾಗಿ ಹಿಟ್ಟು ಹಾಕಬೇಕು )
* 10-12 ನಿಮಿಷ ಬೆಂದ ಹಿಟ್ಟು, ಘಮ್ ಎಂದು ಸುವಾಸನೆ ಬರಲು ಶುರುವಾದಾಗ ಅನ್ನದ ಕೈಯಿಂದಲೇ ಚೆನ್ನಾಗಿ ಕೂಡಿಸಿ, ಎಣ್ಣೆ ಅಥವಾ ತುಪ್ಪ ಸವರಿದ ತಟ್ಟೆಗೆ ಹಿಟ್ಟನ್ನು ಉಂಡೆ ಕಟ್ಟಿ.
ಕೇವಲ 15 ನಿಮಿಷದಲ್ಲಿ ಗಂಟಿಲ್ಲದೆ ರಾಗಿ ಮುದ್ದೆ ಮಾಡಿ, ಗುಳುಂ ಮಾಡಿ.