ಆಸ್ಟ್ರೇಲಿಯಾದ ನೈಟ್‌ಲೈಫ್ ಹಾಗೂ ವಿಭಿನ್ನ ರುಚಿಕರ ಭಕ್ಷ್ಯಗಳು ಸಿಕ್ಕಾಪಟ್ಟೆ ಫೇಮಸ್. ತಿಂಡಿಪೋತರಿಗಂತೂ ಇಲ್ಲಿನ ವೆರೈಟಿ ಫುಡ್‌ಗಳು ತುಂಬಾನೇ ಇಷ್ಟವಾಗುತ್ತವೆ. ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡುವವರು ಅಲ್ಲಿನ ಅನೇಕ ಟೇಸ್ಟಿ ಫುಡ್‌ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನೊಮ್ಮೆ ಟ್ರೈ ಮಾಡಲೇಬೇಕು.
ಚಿಕನ್ ಪರ್ಮಿಗಿಯಾನಾ
ಇದು ಮಾಂಸಪ್ರಿಯರಿಗೆ ಆಸ್ಟ್ರೇಲಿಯಾದಲ್ಲಿ ಲಭ್ಯವಿರುವ ಅದ್ಭುತ ಮತ್ತು ರುಚಿಕರ ತಿನಿಸು. ಇದನ್ನು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ಭಕ್ಷ್ಯಗಳಲ್ಲಿ ಇದೂ ಒಂದಾಗಿದೆ. ಸಾಮಾನ್ಯವಾಗಿ ಅಲ್ಲಿನ ಎಲ್ಲಾ ಪಬ್‌ಗಳಲ್ಲಿಯೂ ಚಿಕನ್ ಪರ್ಮಿಗಿನಿಯಾ ದೊರೆಯುತ್ತದೆ. ಕರಗಿದ ಚೀಸ್ ಮತ್ತು ಪಾರ್ಮಿಜಿಯಾನಾ ಸಾಸ್‌ನೊಂದಿಗೆ ಚಿಕನ್ ಬೆರೆಸಿ ಇದನ್ನು ಮಾಡಲಾಗುತ್ತದೆ.
ಬಾರ್ಬಿಕ್ಯೂ ಸ್ನ್ಯಾಗ್
ಆಸ್ಟ್ರೇಲಿಯನ್ ಜನರು ಸುಟ್ಟ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಸಾಂಪ್ರದಾಯಿಕ ಆಸ್ಟ್ರೇಲಿಯನ್ ಸಾಸೇಜ್‌ಗಳು, ಹಂದಿ ಮತ್ತು ಗೋಮಾಂಸ ಇವರ ಫೇವರಿಟ್. ನೆಚ್ಚಿನ ಸ್ನ್ಯಾಗ್‌ಗಳ ಸುತ್ತಲೂ ಬ್ರೆಡ್ ಹಾಕಿ, ಹುರಿದ ಈರುಳ್ಳಿ ಮತ್ತು ನೆಚ್ಚಿನ ಸಾಸ್ ಸೇರಿಸಿ ಈ ಡಿಶ್ ಅನ್ನು ತಯಾರಿಸಲಾಗುತ್ತದೆ.
ಲ್ಯಾಮಿಂಗ್ಟನ್
ಲ್ಯಾಮಿಂಗ್ಟನ್ ಒಂದು ಬಗೆಯ ಕೇಕ್. ಇದನ್ನು ಆಸ್ಟ್ರೇಲಿಯಾದ ರಾಷ್ಟ್ರೀಯ ಕೇಕ್ ಎಂದೂ ಕರೆಯುತ್ತಾರೆ. ಕ್ವೀನ್ಸ್‌ಲ್ಯಾಂಡ್‌ನ ಮಾಜಿ ಗವರ್ನರ್ ಲಾರ್ಡ್ ಲ್ಯಾಮಿಂಗ್ಟನ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಲ್ಯಾಮಿಂಗ್ಟನ್ ಅನ್ನೋದು ಒಂದು ಸ್ಪಾಂಜ್ ಕೇಕ್. ಇದನ್ನು ಚಾಕಲೇಟ್‌ನಲ್ಲಿ ನೆನೆಸಲಾಗುತ್ತದೆ. ಅದರ ಮೇಲೆ ಒಣ ಕೊಬ್ಬರಿ ತುರಿಯನ್ನು ಹಾಕಲಾಗುತ್ತದೆ.
ಬರ್ಗರ್
ಆಸ್ಟ್ರೇಲಿಯಾದಲ್ಲಿ ಸಿಗುವ ಬರ್ಗರ್ ಕೂಡ ಬಹಳ ಫೇಮಸ್. ಟೊಮೇಟೊ, ಈರುಳ್ಳಿ, ಸೌತೆಕಾಯಿ ಮತ್ತು ಮಾಂಸದ ತುಂಡನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಆಸ್ಟ್ರೇಲಿಯನ್ ಬರ್ಗರ್ ಸಾಕಷ್ಟು ವಿಶೇಷ ಪದಾರ್ಥಗಳನ್ನು ಹೊಂದಿರುತ್ತದೆ. ಇದಕ್ಕೆ ಬಾರ್ಬಿಕ್ಯೂಬ್ ಮೀಟ್, ತರಕಾರಿಗಳು, ಅನಾನಸ್, ಮಸಾಲೆಯುಕ್ತ ಬೀಟ್ರೂಟ್, ಹುರಿದ ಮೊಟ್ಟೆ ಮತ್ತು ಸಾಸ್ ಅನ್ನು ಸೇರಿಸಲಾಗುತ್ತದೆ. ಈ ಬರ್ಗರ್ ಟೇಸ್ಟ್ ಮಾಡಿದ್ರೆ ಬೇರೆ ಕಡೆ ಬರ್ಗರ್ ತಿನ್ನಲು ಮನಸ್ಸಾಗುವುದಿಲ್ಲ.
ಗ್ರಿಲ್ಡ್ ಕಾಂಗರೂ
ಆಸ್ಟ್ರೇಲಿಯಾದ ಜನರು ಕಾಂಗರೂ ಮಾಂಸವನ್ನು ತುಂಬಾ ಆರೋಗ್ಯಕರವೆಂದು ಪರಿಗಣಿಸುತ್ತಾರೆ. ದೇಶದ ಬಹುತೇಕ ಪ್ರತಿಯೊಬ್ಬ ನಾಗರಿಕರು ಕಾಂಗರೂ ಮಾಂಸವನ್ನು ತಿನ್ನುತ್ತಾರೆ. ಕಾಂಗರೂ ಮಾಂಸ ತಿನ್ನಲು ಟೇಸ್ಟಿ ಮಾತ್ರವಲ್ಲ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಕಾರಣದಿಂದಲೇ ಅಲ್ಲಿನ ಜನ ಇದನ್ನು ತುಂಬಾ ಇಷ್ಟಪಡುತ್ತಾರೆ. ಇದನ್ನು ಆಲೂಗಡ್ಡೆ ಮತ್ತು ಈರುಳ್ಳಿಯಂತಹ ತರಕಾರಿಗಳೊಂದಿಗೆ ಬಡಿಸಲಾಗುತ್ತದೆ. ಕಾಂಗರೂ ಮಾಂಸದಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಕೊಬ್ಬಿನಂಶ ಕಡಿಮೆ ಇರುವುದರಿಂದ ಇದು ಆರೋಗ್ಯಕರವಾಗಿದೆ.