ಇತ್ತೀಚಿನ ದಿನಗಳಲ್ಲಿ ಹಠಾತ್ ಸಾವುಗಳ ಸಂಖ್ಯೆ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ, ಡಾನ್ಸ್ ಮಾಡುವ ಸಂದರ್ಭದಲ್ಲಿ ಹೀಗೆ ಹಠಾತ್ತನೆ ಅನೇಕರು ಮೃತಪಟ್ಟಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಯುವಜನತೆ ಈ ರೀತಿ ಸಾವಿಗೆ ತುತ್ತಾಗುತ್ತಿರುವುದು ಆತಂಕಕಾರಿ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಕೂಡ ಮೂಡಿದೆ.
ಯುವಕರ ಹಠಾತ್ ಸಾವಿಗೆ ಕಾರಣಗಳೇನು ಎಂಬ ಬಗ್ಗೆ ಐಸಿಎಂಆರ್ ಕಳೆದ ಮೂರು ವರ್ಷಗಳಿಂದ ಅಧ್ಯಯನ ನಡೆಸುತ್ತಿದೆ. ಅಧ್ಯಯನದ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಅನೇಕರು ಈ ರೀತಿ ಮೃತಪಟ್ಟಿರುವುದು ಅಧ್ಯಯನದಲ್ಲಿ ಬಯಲಾಗಿದೆ.
ಕೆಲವರಿಗೆ ಕೋವಿಡ್ ಲಸಿಕೆ ಬಗ್ಗೆ ಅನುಮಾನವಿತ್ತು. ವ್ಯಾಕ್ಸಿನ್ ದುಷ್ಪರಿಣಾಮದಿಂದ ಈ ಸಾವುಗಳ ಸಂಭವಿಸುತ್ತಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ವಿಜ್ಞಾನಿಗಳು ಅದನ್ನು ಅಲ್ಲಗಳೆದಿದ್ದಾರೆ. ಕೋವಿಡ್ ಲಸಿಕೆಯಿಂದ ಅಂತಹ ಪರಿಣಾಮಗಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಕರೋನಾ ವೈರಸ್, ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ಅಧ್ಯಯನದಲ್ಲಿ ಬಯಲಾಗಿದೆ.
ಭಾರತದ 19 ರಾಜ್ಯಗಳ 47 ಆಸ್ಪತ್ರೆಗಳು ಇದರಲ್ಲಿ ಭಾಗಿಯಾಗಿದ್ದವು. ಅಧ್ಯಯನದ ಡೇಟಾವು ಅಕ್ಟೋಬರ್ 2021 ಮತ್ತು ಮಾರ್ಚ್ 31, 2023ರ ನಡುವಿನದ್ದು. ಈ ವರ್ಷದ ಮೇ ಮತ್ತು ಆಗಸ್ಟ್ ನಡುವೆ ಡೇಟಾವನ್ನು ವಿಶ್ಲೇಷಿಸಲಾಗಿದೆ.
ಅಧ್ಯಯನದಲ್ಲಿ, ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದ ನಂತರ ರೋಗಿಯು 42 ದಿನಗಳವರೆಗೆ ಹೇಗೆ ಕಾರ್ಯನಿರ್ವಹಿಸುತ್ತಾನೆ ಎಂಬುದನ್ನು ನೋಡಲಾಗಿದೆ. WHO ಮಾರ್ಗಸೂಚಿಗಳ ಪ್ರಕಾರ, ಲಸಿಕೆಯ 42 ದಿನಗಳಲ್ಲಿ ಸಂಭವಿಸುವ ಅಡ್ಡಪರಿಣಾಮಗಳು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.
ಹೃದಯಾಘಾತದಿಂದ ಹಠಾತ್ತನೆ ಸಾವನ್ನಪ್ಪಿದವರಲ್ಲಿ ಶೇ.87 ರಷ್ಟು ಜನರು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿದ್ದರು. ಕರೋನಾದಿಂದ ಚೇತರಿಸಿಕೊಂಡ ನಂತರವೂ ಕೆಲವರಲ್ಲಿ ಉಸಿರಾಟದ ತೊಂದರೆ, ಮೆದುಳಿನ ಮಬ್ಬು ಸೇರಿದಂತೆ ಅನೇಕ ಸಮಸ್ಯೆಗಳಿತ್ತು. ಸತ್ತವರಲ್ಲಿ 27 ಪ್ರತಿಶತ ಧೂಮಪಾನಿಗಳು, 27 ಪ್ರತಿಶತದಷ್ಟು ಜನರು ಮದ್ಯ ಸೇವಿಸಿದ್ದಾರೆ.
ಸತ್ತವರಲ್ಲಿ 677 ಜನರು ತಮ್ಮ ಸಾವಿಗೆ 48 ಗಂಟೆಗಳ ಮೊದಲು ಅಂತಹ ಪಾನೀಯಗಳನ್ನು ಸೇವಿಸಿದ್ದಾರೆ. ಹಠಾತ್ ಸಾವಿಗೆ ಆನುವಂಶಿಕ ಕಾರಣಗಳೂ ಇರುವುದು ಪತ್ತೆಯಾಗಿದೆ. ಹಠಾತ್ ಸಾವುಗಳಿಗೆ ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳು ಕಾರಣವೆಂದು ಕಂಡುಬಂದಿದೆ. ಸಾವಿಗೆ 48 ಗಂಟೆಗಳ ಮೊದಲು ತೀವ್ರವಾದ ವ್ಯಾಯಾಮ ಅಥವಾ ಅತಿಯಾದ ಮದ್ಯಪಾನ ವಿಶೇಷವಾಗಿ ಕಾರಣವೆಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.
ಕೋವಿಡ್ ಲಸಿಕೆ ಸಾವುಗಳಿಗೆ ಕಾರಣವಲ್ಲ. ಲಸಿಕೆಯಿಂದ ಜನರು ರಕ್ಷಣೆ ಪಡೆದಿದ್ದಾರೆ. ಅದರಿಂದ ಪ್ರಯೋಜನವಾಗಿದೆ ಎಂದು ಅಧ್ಯಯನದಲ್ಲಿ ಸ್ಪಷ್ಟಪಡಿಸಲಾಗಿದೆ. ಆದಾಗ್ಯೂ ವಿದೇಶದಲ್ಲಿ ನಡೆಸಲಾದ ಕೆಲವು ಅಧ್ಯಯನಗಳಲ್ಲಿ ಕೋವಿಡ್ ಲಸಿಕೆ ಹೃದಯದ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.