ಬಾಲ್ಯದಿಂದಲೂ ನೀವು ಉಗುರು ಕಚ್ಚೋದು ಕೆಟ್ಟ ಅಭ್ಯಾಸ ಎಂದು ಹಿರಿಯರು ಹೇಳ್ತಿರೋದನ್ನ ಕೇಳಿಯೇ ಇರ್ತೀರಿ. ಆದರೆ ಈ ಉಗುರು ಕಚ್ಚುವ ಅಭ್ಯಾಸ ಯಾಕೆ ಕೆಟ್ಟದ್ದು ಅನ್ನೋದಕ್ಕೆ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ. ಉಗುರು ಕಚ್ಚೋದ್ರಿಂದ ಕಾಯಿಲೆ ಬರುತ್ತೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೊಂದು ಕೆಟ್ಟ ಅಭ್ಯಾಸದಿಂದಾಗಿ ಎಂತೆಂತ ಭಯಾನಕ ಕಾಯಿಲೆಗಳು ನಿಮಗೆ ಭಾದಿಸಬಹುದು ಎಂಬುದಕ್ಕೆ ವಿವರಣೆ ಇಲ್ಲಿದೆ. ಸಂಶೋಧನೆಯೊಂದರ ಪ್ರಕಾರ ವಿಶ್ವದ 30 ಪ್ರತಿಶತ ಜನರು ಈ ಕೈ ಬೆರಳಿನ ಉಗುರನ್ನ ಕಚ್ಚುವ ಅಭ್ಯಾಸವನ್ನ ಹೊಂದಿದ್ದಾರೆ.
ಉಗುರುಗಳನ್ನ ಕಚ್ಚೋದ್ರಿಂದ ಮುಖದಲ್ಲಿ ಕೆಂಪು ಕಲೆಗಳು ಉಂಟಾಗೋದ್ರ ಜೊತೆಗೆ ಮುಖ ಊದಿಕೊಳ್ಳುವ ಅಪಾಯವಿದೆ. ಇದು ಮಾತ್ರವಲ್ಲದೇ ಉಗುರುಗಳ ಕೆಳಗೆ ಬ್ಯಾಕ್ಟೀರಿಯಾ ಸೋಂಕು ತಗುಲಬಹುದು. ಹೀಗಾಗಿ ಈ ಕೆಟ್ಟ ಅಭ್ಯಾಸದಿಂದ ದೂರ ಇರೋದು ಒಳ್ಳೆಯದು.
ಉಗುರು ಕಚ್ಚುವ ಅಭ್ಯಾಸದಿಂದಾಗಿ ಪರೋನಿಕಿಯಾದಂತಹ ಬ್ಯಾಕ್ಟೀರಿಯಾಗಳು ದೇಹವನ್ನ ಸೇರುತ್ತವೆ. ಇದು ಮನುಷ್ಯನ ದೇಹದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಕೀವು ಉಂಟಾಗಬಹುದು. ಇಷ್ಟು ಮಾತ್ರವಲ್ಲದೇ ಕೆಲ ಶ್ವಾಶತ ನ್ಯೂನ್ಯತೆಗೂ ಈ ಅಭ್ಯಾಸ ಕಾರಣವಾಗಬಹುದು.
ಈ ಉಗುರು ಕಚ್ಚುವ ಅಭ್ಯಾಸದಿಂದಾಗಿ ಉಗುರಿನ ಬೆಳವಣಿಗೆ ವೇಗ ಕುಂಠಿತವಾಗುತ್ತದೆ. ಈ ಸಮಸ್ಯೆ ಒಮ್ಮೆ ಉದ್ಭವವಾಯ್ತು ಅಂದರೆ ಸರಿ ಮಾಡೋದು ತುಂಬಾನೇ ಕಷ್ಟ.
ಉಗುರು ಕಚ್ಚುವ ಅಭ್ಯಾಸವಿರುವ ಬಹುತೇಕ ಮಂದಿಯ ಮುಂಭಾಗದ ಹಲ್ಲುಗಳಲ್ಲಿ ಸಮಸ್ಯೆ ಕಂಡು ಬರೋದು ಜಾಸ್ತಿ. ಹಲ್ಲು ಮುರಿಯೋದು, ಸವೆಯೋದು ಈ ರೀತಿಯ ಅನೇಕ ಸಮಸ್ಯೆಗಳು ಕಂಡುಬಂದಿದೆ.
ಬಾಲ್ಯದಲ್ಲಿಯೇ ಮಕ್ಕಳಿಂದ ಈ ಅಭ್ಯಾಸವನ್ನ ತಪ್ಪಿಸದೇ ಹೋದಲ್ಲಿ ವಕ್ರದಂತ ಸಮಸ್ಯೆಗೂ ಈ ಅಭ್ಯಾಸ ಕಾರಣವಾಗುತ್ತೆ. ಉಗುರನ್ನ ಕಚ್ಚೋಕೆ ನಾವು ಒಂದರಿಂದ ಎರಡು ಹಲ್ಲನ್ನ ಮಾತ್ರ ಬಳಕೆ ಮಾಡಿಕೊಳ್ತೇವೆ. ನೀವು ಪದೇ ಪದೇ ಆ ಹಲ್ಲಿನಿಂದ ಉಗುರು ಕಚ್ಚೋದ್ರಿಂದ ಹಲ್ಲಿನ ಆಕಾರವೇ ಮಾರ್ಪಾಡಾಗಿ ಬಿಡುತ್ತೆ.
ಉಗುರುಗಳನ್ನ ಹಲ್ಲಿನಿಂದ ಕಚ್ಚಿದ ಬಳಿಕ ಅದರ ತುಂಡುಗಳು ಬಾಯಿಯಲ್ಲೇ ಉಳಿದು ಬಿಡುತ್ತೆ. ಮೊನಚಾದ ಉಗುರು ನಿಮ್ಮ ವಸಡಿಗೆ ಗಾಯ ಮಾಡಬಹುದು. ಇದರಿಂದ ವಸಡಿನಲ್ಲಿ ರಕ್ತ ಬರುತ್ತದೆ.
ಉಗುರು ಕಚ್ಚೋದ್ರಿಂದ ದೇಹಕ್ಕೆ ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತದೆ. ಈ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ.ಇದರಿಂದ ಹೊಟ್ಟೆನೋವು, ಮಲಬದ್ಧತೆ, ಆಸಿಡಿಟಿಯಂತಹ ಸಮಸ್ಯೆಗಳು ಕಂಡುಬರುತ್ತದೆ.