ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಸಾಮಾನ್ಯವಾಗಿ ತಂಪಾದ ಮೊಸರನ್ನು ಸೇವಿಸೋದು ಸಾಮಾನ್ಯ. ಯಾಕಂದ್ರೆ ಮೊಸರು ತಿನ್ನೋದು ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು. ನಿಮ್ಮ ಚರ್ಮ ಮತ್ತು ಕೂದಲಿಗೆ ಇದರಿಂದ ಸಾಕಷ್ಟು ಪ್ರಯೋಜನವಿದೆ.
ನಿಮಗೇನಾದ್ರೂ ತೂಕ ಇಳಿಸುವ ಇರಾದೆ ಇದ್ದರೆ ಮೊಸರು ಸೇವಿಸಲೇಬೇಕು. ಮೊಸರು ದೇಹದ ಇಮ್ಯೂನಿಟಿ ಹೆಚ್ಚಿಸುವುದರ ಜೊತೆಗೆ ಎಲುಬುಗಳಿಗೂ ಶಕ್ತಿ ತುಂಬುತ್ತದೆ. ಆದ್ರೆ ಮೊಸರನ್ನು ಯಾವಾಗ, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಅನ್ನೋದನ್ನು ತಿಳಿದುಕೊಳ್ಳೋದು ಬಹಳ ಮುಖ್ಯ.
ಆಯರ್ವೇದದ ಪ್ರಕಾರ ಮೊಸರು ತೂಕ ಹೆಚ್ಚಿಸಿಕೊಳ್ಳಲು ಕೂಡ ಸಹಕಾರಿಯಂತೆ, ಯಾಕಂದ್ರೆ ಇದು ಜೀರ್ಣವಾಗಲು ಬಹಳ ಸಮಯ ಬೇಕು ಎನ್ನುತ್ತಾರೆ ವೈದ್ಯರು. ಅದರ ಜೊತೆಗೆ ನಿಮ್ಮ ದೇಹದಲ್ಲಿನ ಜೀರ್ಣಶಕ್ತಿಯನ್ನು ಸಹ ಮೊಸರು ಹೆಚ್ಚಿಸುತ್ತದೆ. ಮೊಸರು ಸೇವನೆಯಿಂದ ಪಿತ್ತ, ಕಫ ಹೆಚ್ಚಾಗಬಹುದು, ಆದ್ರೆ ವಾತವನ್ನು ಇದು ಕಡಿಮೆ ಮಾಡಬಲ್ಲದು.
ಮೊಸರನ್ನು ಬಿಸಿ ಮಾಡಿದರೆ ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ. ಬೊಜ್ಜಿನ ಸಮಸ್ಯೆ ಇರುವವರು, ಕಫ, ರಕ್ತಸ್ರಾವದ ತೊಂದರೆ ಇರುವವರು ಇದನ್ನು ಸೇವಿಸದೇ ಇರುವುದು ಉತ್ತಮ. ರಾತ್ರಿ ಹೊತ್ತು ಮೊಸರು ಸೇವನೆ ಸೂಕ್ತವಲ್ಲ.
ಪ್ರತಿನಿತ್ಯ ಮೊಸರು ತಿನ್ನುವ ಬದಲು, ಅದನ್ನು ಮಜ್ಜಿಗೆ ಮಾಡಿ ರಾಕ್ ಸಾಲ್ಟ್, ಜೀರಿಗೆ ಹಾಗೂ ಕಾಳು ಮೆಣಸಿನ ಪುಡಿಯೊಂದಿಗೆ ಸೇವಿಸಿ ಅಂತಾ ವೈದ್ಯರು ಸಲಹೆ ನೀಡ್ತಾರೆ. ಮೊಸರನ್ನು ಯಾವುದೇ ಕಾರಣಕ್ಕೂ ಹಣ್ಣುಗಳೊಂದಿಗೆ ಸೇರಿಸಿ ತಿನ್ನಬೇಡಿ.
ದೀರ್ಘಕಾಲದವರೆಗೆ ಮೊಸರು ಸೇವನೆಯಿಂದ ಅಲರ್ಜಿಯಂತಹ ಸಮಸ್ಯೆ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು. ಮಾಂಸ ಅಥವಾ ಮೀನಿನ ಖಾದ್ಯಗಳೊಂದಿಗೆ ಮೊಸರು ಸೇವನೆ ಸೂಕ್ತವಲ್ಲ. ಇದು ನಿಮ್ಮ ದೇಹದಲ್ಲಿ ಟಾಕ್ಸಿನ್ ಉತ್ಪತ್ತಿ ಮಾಡುತ್ತದೆ. ಹಾಗಾಗಿ ಮೊಸರನ್ನು ಮಧ್ಯಾಹ್ನದ ಹೊತ್ತು ಅಪರೂಪಕ್ಕೊಮ್ಮೆ ಸೇವಿಸುವುದು ಸೂಕ್ತ.