ಇತ್ತೀಚೆಗೆ ಅಡುಗೆ ಮನೆಗೆ ಅನೇಕ ರೀತಿಯ ಇಲೆಕ್ಟ್ರಿಕ್ ಯಂತ್ರಗಳು ಕಾಲಿಟ್ಟಿವೆ. ಅಡುಗೆ ಮಾಡಲು, ರೊಟ್ಟಿ ಬೇಯಿಸಲು, ಅನ್ನ ಮಾಡಲು ಹೀಗೆ ಪ್ರತಿಯೊಂದಕ್ಕೂ ನಾವು ಇಲೆಕ್ಟ್ರಿಕ್ ಸಾಧನಗಳನ್ನು ಬಳಸುತ್ತಿದ್ದೇವೆ. ಅವುಗಳ ಪೈಕಿ ಇಂಡಕ್ಷನ್ ಒಲೆ ಕೂಡ ಒಂದು.
ಇಂಡಕ್ಷನ್ ಒಲೆಯನ್ನು ಹೇಗೆ ಬಳಸಬೇಕು, ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಕೂಡ ನಾವು ತಿಳಿದಿರಬೇಕು. ಗ್ಯಾಸ್ ಸ್ಟೋವ್ ಹೇಗೆ ಸ್ವಚ್ಛ ಮಾಡುತ್ತೇವೆಯೋ ಹಾಗೆ ಇಂಡಕ್ಷನ್ ಕೂಡ ಶುಚಿ ಮಾಡಬೇಕು. ಇಲ್ಲವಾದರೆ ಇಂಡಕ್ಷನ್ ಹಾಳಾಗಬಹುದು. ಇಂಡಕ್ಷನ್ ಶುಚಿಯಾಗಿಡಲು ಮತ್ತು ಬಾಳಿಕೆ ಬರಲು ಹೀಗೆ ಮಾಡಿ.
ಅನವಶ್ಯಕವಾಗಿ ಯಾವುದೇ ಬಟ್ಟೆಯನ್ನು ಇಂಡಕ್ಷನ್ ಮೇಲೆ ಇಡಬೇಡಿ. ನೀರಿನಲ್ಲಿ ಬಟ್ಟೆಯನ್ನು ಅದ್ದಿ ನಂತರ ಇಂಡಕ್ಷನ್ ಅನ್ನು ಸ್ವಚ್ಛಗೊಳಿಸಿ. ಕೆಲವೊಮ್ಮೆ ನೀವು ಅಡುಗೆ ಮಾಡಲು ಅಲ್ಯೂಮಿನಿಯಂ ಪಾತ್ರೆಯನ್ನು ಅಥವಾ ಇನ್ಯಾವುದೋ ಪಾತ್ರೆಯನ್ನು ಬಳಸುತ್ತೀರಿ. ಇವು ಇಂಡಕ್ಷನ್ ಕುಕ್ ಟಾಪ್ ಗೆ ಹೊಂದಿಕೆಯಾಗುವುದಿಲ್ಲ. ಹಾಗಾಗಿ ಅಡುಗೆ ಮಾಡುವ ಮೊದಲು ನೀವು ಉಪಯೋಗಿಸುವ ಪಾತ್ರೆಯ ಬಗ್ಗೆ ಗಮನವಿರಲಿ.
ಇಂಡಕ್ಷನ್ ಬ್ಲೋವರ್ ಅನ್ನು ಹಳೆಯ ಬ್ರಶ್ ನಿಂದ ಸ್ವಚ್ಛಗೊಳಿಸಿ. ಈ ಸಮಯದಲ್ಲಿ ಬ್ರಶ್ ಒದ್ದೆಯಾಗದೇ ಇರುವಂತೆ ಎಚ್ಚರ ವಹಿಸಿ. ಒಣಗಿದ ಬ್ರಶ್ ಸಹಾಯದಿಂದ ಬ್ಲೋವರ್ ಅನ್ನು ಒರೆಸಿದರೆ ಅದರಿಂದ ಧೂಳು, ಮಣ್ಣು ಹೊರಬರುತ್ತವೆ. ನೀರನ್ನು ಕಾಯಿಸಲು ವಿಪರೀತವಾಗಿ ಭಾರವಿರುವ ಪಾತ್ರೆಯನ್ನು ಇಂಡಕ್ಷನ್ ಮೇಲೆ ಇಡಬೇಡಿ. ಇದರಿಂದ ಇಂಡಕ್ಷನ್ ಹಾಳಾಗುತ್ತದೆ. ಯಾವಾಗಲೂ ಒಳ್ಳೆಯ ಬ್ರಾಂಡೆಡ್ ಕಂಪನಿಯ ಇಂಡಕ್ಷನ್ ಖರೀದಿಸಿ. ಒಳ್ಳೆಯ ಕಂಪನಿಯ ಇಂಡಕ್ಷನ್ ಗಳಿಗೆ ವಾರೆಂಟಿ ಪೀರಿಯೆಡ್ ಇರುತ್ತದೆ. ಒಮ್ಮೆ ಇಂಡಕ್ಷನ್ ಹಾಳಾದಲ್ಲಿ ಅದನ್ನು ನೀವು ಸರಿಮಾಡಿಸಬಹುದು.