ನಾವು ಸೇವಿಸುವ ಆಹಾರವೇ ನಮ್ಮ ಸೌಂದರ್ಯದ ಗುಟ್ಟು. ದಿನನಿತ್ಯವೂ ನಾವು ನಮ್ಮ ಚರ್ಮಕ್ಕೆ ಹಾನಿ ಮಾಡಬಲ್ಲ ಹಲವು ವಸ್ತುಗಳನ್ನು ಸೇವಿಸುತ್ತೇವೆ. ಅದರಲ್ಲೂ ಯಾವುದೇ ಪದಾರ್ಥದ ಅತಿಯಾದ ಸೇವನೆ ನಿಮ್ಮ ಚರ್ಮ ಮತ್ತು ದೇಹ ಎರಡಕ್ಕೂ ಹಾನಿಕರ.
ದೇಹದಲ್ಲಿ ಕೆಫೀನ್ ಪ್ರಮಾಣ ಜಾಸ್ತಿಯಾದ್ರೆ ಅದು ನಿಮ್ಮ ಚರ್ಮವನ್ನು ತೆಳುಗೊಳಿಸಲು ಪ್ರಾರಂಭಿಸುತ್ತದೆ. ಇದರಿಂದ ಬೇಗನೆ ಚರ್ಮ ಸುಕ್ಕುಗಟ್ಟಬಹುದು, ಪರಿಣಾಮ ವಯಸ್ಸಾದಂತೆ ಕಾಣಿಸುತ್ತಾರೆ. ಬೇಗ ಮುಪ್ಪು ಬರಬಾರದು ಅಂತಾದ್ರೆ ಕಾಫಿಯನ್ನು ಕಡಿಮೆ ಕುಡಿಯಿರಿ.
ಅತಿಯಾಗಿ ಉಪ್ಪು ತಿಂದರೆ ನಿಮ್ಮ ದೇಹದಲ್ಲಿ ಊತ ಉಂಟಾಗುತ್ತದೆ. ಚರ್ಮ ಕೂಡ ಕ್ರಮೇಣ ಹೊಳಪು ಕಳೆದುಕೊಳ್ಳುತ್ತದೆ. ನಿಮ್ಮ ಚರ್ಮ ಕಾಂತಿಯುಕ್ತವಾಗಿ ಹೊಳೆಯುತ್ತಿರಬೇಕೆಂದರೆ ಉಪ್ಪನ್ನು ಕಡಿಮೆ ತಿನ್ನಿ.
ಅಲ್ಕೊಹಾಲ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ನಿಮ್ಮ ಸೌಂದರ್ಯಕ್ಕೂ ಕುತ್ತು ತರುತ್ತದೆ. ಮದ್ಯಪಾನ ಮಾಡಿದ್ರೆ ನಿಮಗೆ ಡಿಹೈಡ್ರೇಶನ್ ಆಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ನಿಮ್ಮ ಚರ್ಮವು ಸಡಿಲವಾಗಲು ಪ್ರಾರಂಭಿಸುತ್ತದೆ.
ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ವಸ್ತುಗಳು ನಿಮ್ಮ ದೇಹಕ್ಕೆ ಬಹಳಷ್ಟು ಹಾನಿ ಮಾಡುತ್ತದೆ. ಇಂತಹ ಪದಾರ್ಥಗಳನ್ನು ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ಸಮತೋಲನವನ್ನು ಏರುಪೇರಾಗುತ್ತದೆ. ಮಾತ್ರವಲ್ಲ ಮೊಡವೆ ಸಮಸ್ಯೆಗಳು ಸಹ ಉಂಟಾಗುತ್ತದೆ. ಆದ್ದರಿಂದ ಅತಿಯಾದ ಸಕ್ಕರೆ, ಜೇನುತುಪ್ಪ ಅಥವಾ ಬೆಲ್ಲವನ್ನು ತಿನ್ನಬೇಡಿ.
ಮೈದಾಹಿಟ್ಟಿನಿಂದ ತಯಾರಿಸಿದ ತಿನಿಸುಗಳು ತಿನ್ನಲು ಬಲು ರುಚಿ. ಆದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಮೈದಾದಿಂದ ಮಾಡಿದ ತಿಂಡಿಗಳನ್ನು ಅತಿಯಾಗಿ ತಿಂದರೆ ಚರ್ಮಕ್ಕೂ ಹಾನಿಯಾಗುತ್ತದೆ. ಹಾಗಾಗಿ ಮೈದಾವನ್ನು ಕೂಡ ದೂರವಿಡಿ.