
ಕೆಲವು ಮಕ್ಕಳು ನಿದ್ರೆಯಲ್ಲಿ ಅಥವಾ ಎಚ್ಚರವಿರುವಾಗ ಹಲ್ಲು ಕಡಿಯುತ್ತಾರೆ. ಇದು ಅನಾರೋಗ್ಯದ ಮುನ್ಸೂಚನೆ ಎಂದು ಮನೆಯ ಹಿರಿಯರು ಎಚ್ಚರಿಸುವುದನ್ನು ನೀವು ಗಮನಿಸಿರಬಹುದು.
ಮಕ್ಕಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದಾಗ ರಾತ್ರಿ ಹಲ್ಲು ಕಡಿಯುವ ಮೂಲಕ ಅದನ್ನು ಹೊರಹಾಕುತ್ತಾರೆ. ಶಿಕ್ಷಣದ ಬಗ್ಗೆ ಭಯ, ಅಧ್ಯಾಪಕರ ಕುರಿತಾದ ಹೆದರಿಕೆ, ಇಲ್ಲವೇ ಇತರ ಯಾವುದೋ ಕಿರಿಕಿರಿ ಮಕ್ಕಳನ್ನು ಹೀಗೆ ಮಾಡಿಸುತ್ತದೆ.
ವಿಪರೀತವಾಗಿ ಹಲ್ಲು ಕಚ್ಚಿ ಕೆಲವೊಮ್ಮೆ ಒಸಡಿನ ನೋವು ಬರುವುದೂ ಉಂಟು. ಕೌನ್ಸಿಲಿಂಗ್ ಮೂಲಕ ಈ ರೋಗವನ್ನು ಪರಿಹರಿಸಿಕೊಳ್ಳಬಹುದು. ಮಕ್ಕಳ ಬಳಿ ಅಪ್ತವಾಗಿ ಮಾತನಾಡಿ ಶಾಲೆಯಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದು ತಿಳಿದುಕೊಳ್ಳಿ. ಯಾರ ಮೇಲಾದರೂ ಸಿಟ್ಟಿದೆಯೇ ಎಂದು ತಿಳಿದುಕೊಳ್ಳಿ.
ಮಕ್ಕಳ ಬಳಿ ಮಾತನಾಡಿ, ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಒಳ್ಳೆಯ ಕತೆ ಹೇಳಿ ಮಲಗಿಸಿ. ಅಥವಾ ಪುಸ್ತಕ ಓದಿಸಿ. ಶಾಂತ ಚಿತ್ತರಾಗಿ ಮಲಗುವಂತೆ ಮಾಡಿ.