ಕಾರು ಹತ್ತುತ್ತಿದ್ದಂತೆ ಅನೇಕರಿಗೆ ತಲೆ ಸುತ್ತು ಶುರುವಾಗುತ್ತದೆ. ಕಾರು ಮಾತ್ರವಲ್ಲ, ರೈಲು, ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ ಕೂಡ ಈ ಸಮಸ್ಯೆಯಾಗುತ್ತದೆ.
ತಲೆ ಸುತ್ತು, ತಲೆ ನೋವು, ವಾಂತಿ, ವಾಂತಿ ಬಂದಂತ ಅನುಭವವಾಗುತ್ತದೆ. ಇದನ್ನು ಮೋಶನ್ ಸಿಕ್ನೆಸ್ ಎಂದು ಕರೆಯಲಾಗುತ್ತದೆ. ಕಣ್ಣುಗಳು ಮತ್ತು ಕಿವಿಯ ಒಳಭಾಗ, ಮೆದುಳಿಗೆ ಮಿಶ್ರ ಸಂಕೇತಗಳನ್ನು ನೀಡಿದಾಗ ಈ ಸಮಸ್ಯೆ ಕಾಡುತ್ತದೆ. ಇದನ್ನು ಕಾರ್ ಸಿಕ್ನೆಸ್ ಎಂದೂ ಕರೆಯುತ್ತಾರೆ.
ಕೆಲವರಿಗೆ ವಾಂತಿಯಾದ್ರೆ ಮತ್ತೆ ಕೆಲವರಿಗೆ ವಾಂತಿಯ ಅನುಭವವಾಗುತ್ತದೆ. ವಿಪರೀತ ಬೆವರು ಬರುವವರಿದ್ದಾರೆ. ಈ ಸಮಸ್ಯೆಗೆ ನಮ್ಮ ಆಹಾರ ಕೂಡ ಕಾರಣವಾಗುತ್ತದೆ. ಪ್ರಯಾಣದ ವೇಳೆ ನಾವು ಯಾವ ಆಹಾರ ಸೇವನೆ ಮಾಡುತ್ತೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಹೆಚ್ಚು ವಾಸನೆಯುಕ್ತ ಆಹಾರವನ್ನು ಪ್ರಯಾಣಕ್ಕೆ ಮೊದಲು ಸೇವನೆ ಮಾಡಬಾರದು. ಖಾಲಿ ಹೊಟ್ಟೆಯಲ್ಲಿ ಕೂಡ ಪ್ರಯಾಣ ಬೆಳೆಸಬಾರದು. ಕಾರಿನಲ್ಲಿ ಹಾಕುವ ಎಸಿ ಕೂಡ ಅನೇಕರ ಈ ಸಮಸ್ಯೆಗೆ ಕಾರಣವಾಗುತ್ತದೆ. ಆದ ಕಾರಣ ಕಾರಿನ ಕಿಟಕಿ ತೆಗೆದು ಸ್ವಲ್ಪ ಸಮಯ ಸ್ವಚ್ಛ ಗಾಳಿಯಲ್ಲಿ ಉಸಿರಾಡಬೇಕು. ಇದು ಸಮಸ್ಯೆ ಕಡಿಮೆ ಮಾಡಲು ನೆರವಾಗುತ್ತದೆ.
ಪ್ರಯಾಣಕ್ಕೆ ಮೊದಲು ಶುಂಠಿ ಹಾಗೂ ಪುದೀನಾ ಎಲೆಯ ಟೀ ಸೇವನೆ ಮಾಡುವುದ್ರಿಂದಲೂ ಇದು ಕಡಿಮೆಯಾಗುತ್ತದೆ. ಸಮಸ್ಯೆ ಉಲ್ಬಣಗೊಂಡಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಅನೇಕರಿಗೆ ಚಲಿಸುವ ವಾಹನದಲ್ಲಿ ಮೊಬೈಲ್ ವೀಕ್ಷಣೆ ಮಾಡಿದ್ರೆ ತಲೆ ಸುತ್ತು, ವಾಕರಿ ಕಾಡುತ್ತದೆ. ಅಂಥವರು ವಾಹನ ಚಲಿಸುವ ವೇಳೆ ಮೊಬೈಲ್ ಬಳಸದಿರುವುದು ಸೂಕ್ತ.