ಆರೋಗ್ಯಕರ ದೇಹಕ್ಕಾಗಿ ನಾವು ವ್ಯಾಯಾಮ ಮಾಡ್ತೇವೆ. ಆದ್ರೆ ಬುದ್ದಿಯನ್ನು ಚುರುಕಾಗಿಸಿಕೊಳ್ಳಲು ಕೆಲವೇ ಕೆಲವು ಮಂದಿ ಮಾತ್ರ ವ್ಯಾಯಾಮ ಮಾಡ್ತಾರೆ. ಬುದ್ದಿ ಚುರುಕಾಗಿರಲು ಕೆಲವೊಂದು ವ್ಯಾಯಾಮ ಮಾಡುವ ಅವಶ್ಯಕತೆ ಇದೆ. ಕೆಲವೊಂದು ಕೆಲಸ ಮಾಡಿದ್ರೆ ನಮ್ಮ ದೇಹ ದಣಿಯುತ್ತದೆ. ಹಾಗೆ ಕೆಲವೊಂದು ವಿಷಯಗಳ ಬಗ್ಗೆ ವಿಚಾರ ಮಾಡಿದ್ರೆ ನಮ್ಮ ಮೆದುಳು ದಣಿದು ಚುರುಕಾಗುತ್ತದೆ.
ಸಂಗೀತ ಬುದ್ದಿ ಚುರುಕುಗೊಳಿಸುವ ಸುಲಭ ಮಾರ್ಗ. ಸಂಗೀತ ಕೇಳುವುದರಿಂದ ದಣಿದ ಮನಸ್ಸು ಮತ್ತೆ ಉಲ್ಲಾಸಿತಗೊಳ್ಳುತ್ತದೆ. ಸಂಗೀತ ಮೆದುಳಿನ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ. ಸಂಗೀತ ಕೇಳುವ ಜೊತೆಗೆ ಸಂಗೀತ ಕಲಿತರೆ ಹೆಚ್ಚಿನ ಲಾಭ ಪಡೆಯಬಹುದು.
ನಿಮ್ಮ ಮೆದುಳನ್ನು ಪರೀಕ್ಷೆಗೊಳಪಡಿಸಬೇಕಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಇಂದಿನ ದಿನ ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿ. ಪಟ್ಟಿಯನ್ನು ಪಕ್ಕಕ್ಕಿಟ್ಟು ನಿಮ್ಮ ಕೆಲಸ ಮಾಡಲು ಶುರುಮಾಡಿ. ರಾತ್ರಿ ಯಾವ ಕೆಲಸ ನೆನಪಿದೆ ಯಾವ ಕೆಲಸವನ್ನು ಮರೆತಿದ್ದೀರೆಂಬುದನ್ನು ಪರಿಶೀಲಿಸಿಕೊಳ್ಳಿ.
ಮನೆ ಲೆಕ್ಕವಿರಲಿ, ಕಚೇರಿಯ ಲೆಕ್ಕವಿರಲಿ ಕ್ಯಾಲ್ಕುಲೇಟರ್ ಬದಿಗಿಟ್ಟು ಪಟ್ಟಿ-ಪೆನ್ನು ಹಿಡಿಯಿರಿ. ಯಾರ ಸಹಾಯವೂ ಇಲ್ಲದೆ ಲೆಕ್ಕ ಮಾಡುವುದರಿಂದ ಬುದ್ದಿ ಚುರುಕಾಗುತ್ತದೆ.
ಹೊಸ ಭಾಷೆ ಕಲಿಯುವುದರಿಂದಲೂ ನಿಮ್ಮ ಬುದ್ದಿ ಚುರುಕಾಗುತ್ತದೆ. ಯಾವುದೇ ಇರಲಿ ಹೊಸ ಭಾಷೆ ಕಲಿಯುವ ಪ್ರಯತ್ನ ಮಾಡಿ. ದಿನ ಕಳೆದಂತೆ ಇದ್ರಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ನಿಮ್ಮ ಕೆಲಸ ಬಿಟ್ಟು ಸ್ವಲ್ಪ ಹೊತ್ತು ಬೇರೆ ಕೆಲಸ ಮಾಡಿ. ಅಡುಗೆ ಮನೆಗೂ ಹೋಗಬಹುದು. ರುಚಿರುಚಿ ಅಡುಗೆ ತಯಾರಿ ಕೂಡ ನಿಮ್ಮನ್ನು ಚುರುಕುಗೊಳಿಸುತ್ತದೆ.