ಬೇಸಿಗೆಯಲ್ಲಿ ಎಲ್ಲರೂ ಬಿಸಿಲಿನಿಂದ ದೂರ ಓಡ್ತಾರೆ. ಫ್ಯಾನ್ ಗಾಳಿ, ತಣ್ಣನೆಯ ಎಸಿಯನ್ನು ಬಯಸ್ತಾರೆ. ಆದರೆ ಚಳಿಗಾಲದಲ್ಲಿ ಸೂರ್ಯನ ಬೆಳಕು, ಶಾಖ ಎಲ್ಲರಿಗೂ ಬೇಕೆನಿಸುತ್ತದೆ. ಚಳಿಗಾಲದಲ್ಲಿ ಪ್ರತಿಯೊಬ್ಬರೂ ತಪ್ಪದೇ ಸೂರ್ಯನ ಶಾಖಕ್ಕೆ ಒಡ್ಡಿಕೊಳ್ಳಬೇಕು. ಚಳಿಗಾಲದಲ್ಲಿ ಪ್ರತಿನಿತ್ಯ ಕೇವಲ 10 ನಿಮಿಷ ಬಿಸಿಲಿನಲ್ಲಿ ಕುಳಿತರೂ ದೇಹಕ್ಕೆ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಸಿಗುತ್ತದೆ. ಆರೋಗ್ಯವಾಗಿರಲು ನೀವು ಬಯಸಿದರೆ ಚಳಿಗಾಲದಲ್ಲಿ ವಾರಕ್ಕೆ 4 ದಿನವಾದರೂ ಸೂರ್ಯನ ಬೆಳಕನ್ನು ತೆಗೆದುಕೊಳ್ಳಬೇಕು.
ಚಳಿಗಾಲದಲ್ಲಿ ಸೂರ್ಯ ಸ್ನಾನದಿಂದ ಇನ್ನೂ ಅನೇಕ ಅನುಕೂಲಗಳಿವೆ. ಮಾನಸಿಕ ಆರೋಗ್ಯಕ್ಕೂ ಇದು ಪ್ರಯೋಜನಕಾರಿ. ಚಳಿಗಾಲದಲ್ಲಿ ಎಳೆ ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ಮೆದುಳಿಗೆ ಅನುಕೂಲವಾಗುತ್ತದೆ. ಖಿನ್ನತೆಯನ್ನೂ ಇದು ಕಡಿಮೆ ಮಾಡುತ್ತದೆ. ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಸಿಗುತ್ತದೆ. ವಿಟಮಿನ್ ಡಿ ಕೊರತೆಯಿಂದಾಗಿ ಮೆದುಳು ಸರಿಯಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ. ಯುವಜನತೆಯಲ್ಲಿ ವಿಟಮಿನ್ ಡಿ ಕೊರತೆಯಿದ್ದರೆ, ಈ ಕಾರಣದಿಂದಾಗಿ ಖಿನ್ನತೆಯಿಂದ ಬಳಲುವ ಸಾಧ್ಯತೆ ಹೆಚ್ಚು.
ಪ್ರತಿದಿನ ಬಿಸಿಲಿನಲ್ಲಿ ಕುಳಿತರೆ ವಿಟಮಿನ್ ಡಿ ಪಡೆಯುವ ಮೂಲಕ ಖಿನ್ನತೆಯನ್ನೂ ಕಡಿಮೆ ಮಾಡಿಕೊಳ್ಳಬಹುದು. ಚಳಿಗಾಲದಲ್ಲಿ ಸೂರ್ಯನ ಬೆಳಕನ್ನು ತೆಗೆದುಕೊಳ್ಳುವುದರಿಂದ ಮೆದುಳಿನ ಕೋಶಗಳು ಸಕ್ರಿಯವಾಗಿರುತ್ತವೆ ಮತ್ತು ಇದರಿಂದಾಗಿ ಮೆದುಳು ಆರೋಗ್ಯಕರವಾಗಿರುತ್ತದೆ. ಸಮತೋಲಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೆದುಳಿನ ಜೀವಕೋಶಗಳು ಸಕ್ರಿಯವಾಗಿದ್ದರೆ ಯೋಚಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಆದ್ದರಿಂದ ಮಾನಸಿಕವಾಗಿ ಆರೋಗ್ಯವಾಗಿರಲು ಬಯಸಿದರೆ ಖಂಡಿತವಾಗಿಯೂ ಪ್ರತಿದಿನ ಬಿಸಿಲಿನಲ್ಲಿ ಕುಳಿತುಕೊಳ್ಳಿ.
ಚಳಿಗಾಲದಲ್ಲಿ ಬೆಳಗ್ಗೆ 10 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಒಟ್ಟಿಕೊಂಡಾಗ ದೇಹದಿಂದ ಮೆಲಟೋನಿನ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ರಾತ್ರಿಯಲ್ಲಿ ಆಳವಾದ ಮತ್ತು ಉತ್ತಮ ನಿದ್ರೆಯನ್ನು ಹೊಂದಲು ನಿಮಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಸೂರ್ಯನ ಕಿರಣಗಳು ಸಿರೊಟೋನಿನ್ ಅನ್ನು ಹೀರಿಕೊಳ್ಳುತ್ತವೆ, ಇದು ಮನಸ್ಥಿತಿಯನ್ನು ಸಂತೋಷವಾಗಿಡಲು ಸಹಾಯ ಮಾಡುತ್ತದೆ.