ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮರೀಚಿಕೆಯಾಗಿದೆ. ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಎಲ್ಲರನ್ನೂ ಕಾಡ್ತಿದೆ. ಉತ್ತಮ ಆರೋಗ್ಯವನ್ನು ಎಲ್ಲರೂ ಬಯಸುತ್ತಾರೆ. ಡಯಟ್, ವ್ಯಾಯಾಮ, ಯೋಗ ಹೀಗೆ ಆರೋಗ್ಯ ವೃದ್ಧಿಗೆ ಅನೇಕ ಕಸರತ್ತುಗಳನ್ನು ಮಾಡ್ತಾರೆ. ಇದ್ರ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಮಹತ್ವದ ವಿಷ್ಯವೊಂದನ್ನು ನೆನಪಿಟ್ಟುಕೊಂಡು ಪಾಲನೆ ಮಾಡಬೇಕಾಗುತ್ತದೆ.
ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ ಜೊತೆ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಊಟ ಮಾಡುವ ಸಮಯ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಕೆಲಸದ ಒತ್ತಡ ಹಾಗೂ ಜೀವನ ಶೈಲಿಯಲ್ಲಾಗ್ತಿರುವ ಬದಲಾವಣೆಯಿಂದಾಗಿ ಜನರು ಮಧ್ಯರಾತ್ರಿ ಊಟ ಮಾಡಿ, ಬೆಳಗಿನ ಜಾವ ನಿದ್ರೆ ಮಾಡ್ತಾರೆ. ಬೆಳಿಗ್ಗೆ ತಡವಾಗಿ ಎದ್ದೇಳುವುದಲ್ಲದೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟವನ್ನು ಸರಿಯಾಗಿ ಮಾಡುವುದಿಲ್ಲ. ನಾವು ಮಾಡುವ ಊಟದ ಸಮಯ ನಮ್ಮ ಆರೋಗ್ಯದ ಮೇಲೆ ಗಂಭೀರ ಪ್ರಭಾವ ಬೀರುತ್ತದೆ.
ತಜ್ಞರ ಪ್ರಕಾರ ರಾತ್ರಿ ಊಟವನ್ನು ಸಂಜೆ 7 ಗಂಟೆಯೊಳಗೆ ಮಾಡಬೇಕು. ನಿಜ, ಸಂಜೆ 7 ಗಂಟೆಯೊಳಗೆ ನೀವು ಊಟ ಮಾಡ್ತಾ ಬಂದ್ರೆ ನಿಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಳನ್ನು ನೀವು ಗಮನಿಸಬಹುದಾಗಿದೆ. ಸರಿಯಾಗಿ ನಿದ್ರೆ ಬರುತ್ತದೆ. ತೂಕ ಇಳಿಸಿಕೊಳ್ಳಲು ಇದು ನೆರವಾಗುತ್ತದೆ. ಮಲಗುವ ವೇಳೆ ಕಾಡುವ ಹೊಟ್ಟೆ ನೋವು, ತಲೆ ನೋವು ಮತ್ತೆ ಕಾಣಿಸಿಕೊಳ್ಳುವುದಿಲ್ಲ. ಹಾಗೆ ಮರುದಿನ ಉತ್ಸಾಹದಿಂದ ಕೆಲಸ ಮಾಡಲು ನೆರವಾಗುತ್ತದೆ.
ಸಂಜೆ ಊಟ ಸರಳವಾಗಿರಬೇಕು. ಹೆಚ್ಚು ಪ್ರೋಟೀನ್ ಇರುವ ಆಹಾರವನ್ನು ಸೇವನೆ ಮಾಡಬಾರದು. ತೂಕ ಇಳಿಸಿಕೊಳ್ಳಲು ಬಯಸುವವರು ಅವಶ್ಯವಾಗಿ ಸಂಜೆ 7 ರೊಳಗೆ ಊಟ ಮುಗಿಸಬೇಕು. ಜೀರ್ಣ ಕ್ರಿಯೆಯನ್ನು ಅತ್ಯುತ್ತಮಗೊಳಿಸಿ ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗಲು ನೆರವಾಗುತ್ತದೆ. ಇದ್ರಿಂದ ಹೊಟ್ಟೆಯಲ್ಲಿ ಸಮಸ್ಯೆ ಕಾಡುವುದಿಲ್ಲ. ಬೇಗ ಜೀರ್ಣವಾಗುವ ಕಾರಣ ನಿದ್ರೆ ಸುಲಭವಾಗಿ ಬರುತ್ತದೆ.