ಕೆಲವರಿಗೆ ಮಾವಿನ ಹಣ್ಣು ಹೆಚ್ಚು ತಿಂದರೆ ದೇಹದ ಉಷ್ಣತೆ ಹೆಚ್ಚಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕೆಲವರು ಮಾವಿನಹಣ್ಣನ್ನು ಸ್ವಲ್ಪ ಮಿತಿಯಾಗಿ ಸೇವಿಸುತ್ತಾರೆ. ಮಾವಿನ ಹಣ್ಣಿನ ಸೇವನೆಯಿಂದ ಉಷ್ಣತೆ ಬಾರದಿರಲು ಈ ಕ್ರಮವನ್ನು ಅನುಸರಿಸಿ.
* ಮಾವಿನ ಹಣ್ಣಿನ ಸೀಸನ್ ನಲ್ಲಿ ಬೇಯಿಸಿದ ಬಾರ್ಲಿ ಗಂಜಿಗೆ ಸಕ್ಕರೆ, ಹಾಲು ಅಥವಾ ಮಜ್ಜಿಗೆ ಸೇರಿಸಿ ಕುಡಿಯಿರಿ. ಪ್ರತಿದಿನ ಬೆಳಗ್ಗೆ ರಾಗಿ ಗಂಜಿ ಸೇವಿಸಿದರೂ ದೇಹ ತಂಪಾಗಿರುತ್ತದೆ.
* ಪ್ರತಿಸಲ ಮಾವಿನ ಹಣ್ಣನ್ನು ತಿಂದ ಮೇಲೆ ಅರ್ಧ ಕಪ್ ತಣ್ಣನೆಯ ಹಾಲು ಕುಡಿಯಿರಿ. ಸಾಧ್ಯವಾದಷ್ಟು ಊಟ ಮಾಡಿದ ನಂತರ ಮಾವಿನ ಹಣ್ಣು ತಿನ್ನಿ.
* ಮಾವಿನಹಣ್ಣಿಗೆ ಬಾಳೆಹಣ್ಣು ಮತ್ತು ಜೇನುತುಪ್ಪ ಸೇರಿಸಿ ರಸಾಯನ ಮಾಡಿ ಸೇವಿಸಿದರೆ ದೇಹ ತಂಪಾಗುತ್ತದೆ.
* ರತ್ನಗಿರಿ ಅಪೂಸ್ ಮಾವಿನ ಹಣ್ಣಿನ ರಸಕ್ಕೆ ಹಾಲು, ಸಕ್ಕರೆ ಅಥವಾ ಪುಡಿ ಬೆಲ್ಲ, ಏಲಕ್ಕಿ ಪುಡಿ ಸೇರಿಸಿ ತುಪ್ಪ ಮತ್ತು ಚಪಾತಿ ಜೊತೆ ತಿಂದರೆ ಉಷ್ಣತೆ ಬಾಧಿಸದು.
* ಬೇಯಿಸಿ ತಣ್ಣಗೆ ಮಾಡಿದ ಬಾರ್ಲಿ ನೀರಿಗೆ ಮಾವಿನ ಹಣ್ಣಿನ ರಸ, ಸಕ್ಕರೆ ಅಥವಾ ಬೆಲ್ಲದ ಪುಡಿ ಸೇರಿಸಿ ಸವಿದರೆ ಉಷ್ಣತೆಯಾಗದು.
* ದಿನಕ್ಕೊಮ್ಮೆ ಒಂದು ಲೋಟ ನೀರು ಮಜ್ಜಿಗೆಗೆ ಒಂದು ಚಿಟಿಕೆ ಉಪ್ಪು ಹಾಕಿ ಕುಡಿದರೆ ಮಾವಿನಹಣ್ಣಿನ ಉಷ್ಣತೆ ಸಂಬಂಧಿ ತೊಂದರೆ ಕಾಣಿಸಿಕೊಳ್ಳುವುದಿಲ್ಲ.
* ದಿನಕ್ಕೊಂದು ಪಚ್ಚ ಬಾಳೆಹಣ್ಣು ತಿಂದರೆ ದೇಹದ ಉಷ್ಣತೆ ಸಮವಾಗಿರುತ್ತದೆ. ಸೌತೆಕಾಯಿ, ಹೆಸರುಬೇಳೆ, ಹೆಸರುಕಾಳುಗಳನ್ನು ಹೆಚ್ಚು ಉಪಯೋಗಿಸಿದರೂ ಮಾವು ತಿನ್ನಲು ಅಡ್ಡಿಯಿಲ್ಲ.
* ಬೇಯಿಸಿದ ಮಾವಿನಕಾಯಿಯ ತಿರುಳಿಗೆ ಬೆಲ್ಲ ಅಥವಾ ಸಕ್ಕರೆ, ಸ್ವಲ್ಪ ಉಪ್ಪು, ಜೀರಿಗೆ ಪುಡಿ ಸೇರಿಸಿ ಮಾಡಿದ ಪಾನಕ ದೇಹಕ್ಕೆ ತಂಪು ನೀಡುತ್ತದೆ.
* ನೇರಳೆ ಹಣ್ಣು ಅಥವಾ ನೇರಳೆ ಹಣ್ಣಿನ ಶರಬತ್ ಮಾಡಿ ಕುಡಿದರೂ ಮಾವಿನ ಹಣ್ಣು ತಿಂದಾಗ ಬರುವ ಹೊಟ್ಟೆಯ ತೊಂದರೆಗಳು ನಿವಾರಣೆಯಾಗುತ್ತವೆ.