ದಿನದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಸೊಂಟ ನೋವು ಸಮಸ್ಯೆ ಕಾಡುತ್ತದೆ. ನಾವು ಕುಳಿತುಕೊಳ್ಳವ ಭಂಗಿ ಸರಿಯಾಗಿರದಿದ್ದಾಗ ಈ ಸಮಸ್ಯೆ ಕಾಡುತ್ತದೆ. ಈ ಸೋಂಟ ನೋವನ್ನು ನಿವಾರಿಸಲು ಈ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ.
*ಭಾರದ್ವಾಜ ಟ್ವಿಸ್ಟ್ : ಈ ಯೋಗ ನಿಮ್ಮ ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳಿಗೆ ಮೃದುವಾದ ತಿರುವನ್ನು ನೀಡುತ್ತದೆ. ನಿಮ್ಮ ಎರಡು ಕಾಲುಗಳನ್ನು ಮುಂಭಾಗಕ್ಕೆ ಚಾಚಿಕೊಂಡು ನಿಮ್ಮ ಎಡ ಮೊಣಕಾಲನ್ನು ಬಗ್ಗಿಸಿ, ಬಳಿಕ ಬಲ ಮೊಣಕಾಲನ್ನು ಬಗ್ಗಿಸಿ ಅದನ್ನು ಎಡ ತೊಡೆಯ ಮೇಲೆ ಇರಿಸಿ. ನಿಮ್ಮ ಎಡ ಅಂಗೈಯನ್ನು ನಿಮ್ಮ ಬಲ ಮೊಣಕಾಲಿನ ಕೆಳಗೆ ಇರಿಸಿ. ಈಗ ನಿಮ್ಮ ಭುಜವನ್ನು ತಿರುಗಿಸಿ, ಬಲಗೈಯನ್ನು ಹಿಂಭಾಗಕ್ಕೆ ತೆಗೆದುಕೊಳ್ಳಿ. ನೀವು ಇದನ್ನು ಮಾಡುವಾಗ ನಿಮ್ಮ ನೋಟ ಬಲ ಭುಜದ ಮೇಲೆ ಇರಲಿ. ಈ ಭಂಗಿಯಲ್ಲಿ ನಿಧಾನವಾಗಿ ಉಸಿರಾಡಿ. ಬಳಿಕ ನಿಮ್ಮ ಇನ್ನೊಂದು ಬದಿಯಲ್ಲಿ ಇದನ್ನು ಮಾಡಿ.
*ಕ್ಯಾಟ್ ಪೋಸ್ : ಈ ಯೋಗಾಸನವು ನಿಮ್ಮ ಬೆನ್ನು ಮತ್ತು ನಿಮ್ಮ ಹೊಟ್ಟೆಯ ಅಂಗಗಳನ್ನು ನಿಧಾನವಾಗಿ ಮಸಾಜ್ ಮಾಡುತ್ತದೆ. ನಿಮ್ಮ ಮೊಣಕಾಲನ್ನು ನಿಮ್ಮ ಸೊಂಟಕ್ಕಿಂತ ಕೆಳಗೆ ಇಡಿ. ನಿಮ್ಮ ಕೈ ಮಣಿಕಟ್ಟುಗಳು ನಿಮ್ಮ ಭುಜಗಳಿಗೆ ಲಂಬವಾಗಿರಲಿ. ನಿಮ್ಮ ತಲೆಯನ್ನು ತಟಸ್ಥ ಸ್ಥಾನದಲ್ಲಿ ಇರಿಸಿ ಮತ್ತು ನೋಟವನ್ನು ನೆಲದ ಕಡೆಗೆ ಇರಿಸಿ. ಈ ಭಂಗಿಯಲ್ಲಿ ನಿಧಾನವಾಗಿ ಉಸಿರಾಡಿ. ಬಳಿಕ ಬೆನ್ನು ಮೂಳೆಯನ್ನು ಕೆಳಕ್ಕೆ ತಳ್ಳಿ ಮತ್ತು ತಲೆಯನ್ನು ಮೇಲಕ್ಕೆತ್ತಿ.
*ಬೌಂಡ್ ಆ್ಯಂಗಲ್ ಫೋಸ್ : ಸೊಂಟ ನೋವಿಗೆ ಇದು ಅತ್ಯುತ್ತಮ ಪರಿಣಾಮಕಾರಿ ಭಂಗಿಯಾಗಿದೆ. ಈ ಭಂಗಿಯು ಸೊಂಟವನ್ನು ತೆರೆಯುತ್ತದೆ. ಇದರಿಂದ ಸೊಂಟದ ಸುತ್ತಲಿನ ಸ್ನಾಯುಗಳಿಗೆ ಪೂರ್ಣ ಪ್ರಮಾಣದ ಚಲನೆ ಸಿಗುತ್ತದೆ. ನಿಮ್ಮ ಕಾಲುಗಳನ್ನು ಮುಂಭಾಗಕ್ಕೆ ಚಾಚಿಕೊಂಡು ಬೆನ್ನು ನೇರವಾಗಿ ಇಟ್ಟುಕೊಂಡು ಕೈಗಳನ್ನು ನೇರವಾಗಿ ಇರಿಸಿ ಮತ್ತು ಅಂಗೈಯನ್ನು ನೆಲದ ಮೇಲೆ ಇರಿಸಿ. ಎರಡೂ ಕಾಲುಗಳನ್ನು ಮಡಚಿ ಪಾದಗಳು ಒಂದಾನೊಂದು ಸ್ಪರ್ಶಿಸುವಂತೆ ಮತ್ತು ಕೈಗಳಿಂದ ಹಿಡಿದುಕೊಳ್ಳಿ.