
ಮನೆಗೆ ಹೊಸ ಬಟ್ಟೆ ತಂದಾಕ್ಷಣ ಮನೆಯಲ್ಲಿರುವ ಹಿರಿಯರು ಒಗೆಯದೆ ಧರಿಸಬೇಡ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದರ ಹಿಂದಿರುವ ಸಕಾರಣ ಯಾವುದು ಎಂದು ನಿಮಗೆ ಗೊತ್ತೇ?
ಹೊಸ ಬಟ್ಟೆಗಳು ಬ್ಯಾಕ್ಟೀರಿಯಾಗಳ ತವರಾಗಿರುತ್ತದೆ. ಇದು ನಿಮ್ಮ ದೇಹಕ್ಕೆ ಕೀಟಾಣುಗಳನ್ನು ವರ್ಗಾಯಿಸಬಹುದು. ಹಾಗಾಗಿ ಒಗೆಯದೆ ಯಾವ ಬಟ್ಟೆಯನ್ನು ಬಳಸುವುದೂ ಒಳ್ಳೆಯದಲ್ಲ.
ಫ್ಯಾಕ್ಟರಿಗಳಲ್ಲಿ ಬಟ್ಟೆ ತಯಾರಿ ಅಥವಾ ಹೊಲಿಯುವ ವೇಳೆ ಅದನ್ನು ಸಾಮಾನ್ಯ ಉಡುಪುಗಳಂತೆ ನೆಲದ ಮೇಲೆಯೇ ಇಟ್ಟಿರುತ್ತಾರೆ. ಬಳಿಕ ಅದು ಒಂದು ಸ್ಥಳದಿಂದ ಇನ್ನೊಂದು ಜಾಗಕ್ಕೆ ವಾಹನಗಳ ಮೂಲಕ ವರ್ಗಾವಣೆಯಾಗುತ್ತದೆ. ಆಗ ಅವುಗಳ ಮೇಲೆ ಅದೆಷ್ಟು ಧೂಳು, ಕೊಳೆ ಕುಳಿತಿರುತ್ತದೋ ಅವೆಲ್ಲಾ ನಿಮ್ಮ ಮೈಗಂಟುವ ಸಾಧ್ಯತೆಗಳಿವೆ.
ನೀವು ಖರೀದಿ ಮಾಡಿರುವ ಉಡುಪನ್ನು ಅದೆಷ್ಟೋ ಜನ ಟ್ರಯಲ್ ಮಾಡಿ ನೋಡಿ ಬಿಟ್ಟಿರಬಹುದು. ನೀವು ಒಗೆಯದೆ ನೇರವಾಗಿ ಧರಿಸಿದರೆ ಅವರಿಗಿರುವ ಚರ್ಮರೋಗಗಳು ನಿಮಗೂ ಅಂಟಬಹುದು. ಇದರಿಂದ ತುರಿಕೆ, ಅಲರ್ಜಿಯೂ ಕಾಣಿಸಿಕೊಳ್ಳಬಹುದು.