
ದೇಹದ ದಣಿವನ್ನು ನಿವಾರಿಸಲು ಆಗಾಗ್ಗೆ ಅನೇಕರು ಟೀ ಕುಡಿಯುತ್ತಾರೆ. ಹೊಸ ಉಲ್ಲಾಸ ನೀಡುವ ಜೊತೆಗೆ ಟೀ ತಲೆನೋವು ಕಡಿಮೆ ಮಾಡುತ್ತದೆ. ಚಹಾ ತಯಾರಿಸಿದ ನಂತ್ರ ಬಳಸಿದ ಟೀ ಪುಡಿಯನ್ನು ಬಹುತೇಕರು ಕಸಕ್ಕೆ ಹಾಕ್ತಾರೆ. ಕಸಕ್ಕೆ ಹಾಕುವ ಮೊದಲು ಅದ್ರ ಪ್ರಯೋಜನ ತಿಳಿದುಕೊಳ್ಳಿ.
ಒಮ್ಮೆ ಟೀ ತಯಾರಿಸಿದ ಪುಡಿಯಿಂದ ಮತ್ತೊಮ್ಮೆ ಟೀ ತಯಾರಿಸಬಹುದು. ಟೀ ಪುಡಿಯನ್ನು ಚೆನ್ನಾಗಿ ತೊಳೆದು ನೆರಳಿನಲ್ಲಿ ಒಣಗಿಸಿ ನಂತ್ರ ಬಳಸಿದ್ರೆ ಅದ್ರ ರುಚಿ ಮೊದಲ ಟೀ ರುಚಿಯಂತೆ ಇರುತ್ತದೆ.
ಬಳಸಿದ ಟೀ ಪುಡಿಯನ್ನು ನೀರಿನಲ್ಲಿ ತೊಳೆದು ಮತ್ತೆ ನೀರು ಹಾಕಿ ಕುದಿಸಿ. ಆ ನೀರು ತಣ್ಣಗಾದ ಮೇಲೆ ಬಾಯಿ ಮುಕ್ಕಳಿಸಿ. ಇದ್ರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.
ಎಣ್ಣೆ ಅಥವಾ ತುಪ್ಪದ ಡಬ್ಬವನ್ನು ಸ್ವಚ್ಛಗೊಳಿಸಲು ನೀವು ಇದನ್ನು ಬಳಸಬಹುದು. ಟೀ ಪುಡಿಯನ್ನು ಡಬ್ಬ ಕ್ಲೀನ್ ಮಾಡಲು ಬಳಸಿದ್ರೆ ತುಪ್ಪದ ವಾಸನೆ ಸುಲಭವಾಗಿ ಹೋಗುತ್ತದೆ.
ನೊಣಗಳ ಸಮಸ್ಯೆಯಿದ್ರೆ ಬಳಸಿದ ಟೀ ಪುಡಿಯನ್ನು ನೀರಿನಲ್ಲಿ ತೊಳೆದು ನಂತ್ರ ನೊಣ ಬರುವ ಜಾಗಕ್ಕೆ ಹಾಕಿ. ಇದ್ರಿಂದ ನೊಣದ ಸಮಸ್ಯೆ ಕಡಿಮೆಯಾಗುತ್ತದೆ.
ಟೀ ಪುಡಿಯನ್ನು ನೀರಿನಲ್ಲಿ ಕುದಿಸಿ ಅದನ್ನು ಸ್ಪ್ರೇ ಬಾಟಲಿಗೆ ಹಾಕಿ. ನಂತ್ರ ಪೀಠೋಪಕರಣದ ಮೇಲೆ ಹಾಕಿ ಉಜ್ಜಿದ್ರೆ ಪೀಠೋಪಕರಣ ಹೊಳಪು ಪಡೆಯುತ್ತದೆ.
ಟೀ ಎಲೆಗಳಲ್ಲಿ ಆಂಟಿ-ಆಕ್ಸಿಡೆಂಟ್‌ಗಳಿವೆ. ಗಾಯದ ಮೇಲೆ ಹಚ್ಚಿದ್ರೆ ರಕ್ತಸ್ರಾವ ಬೇಗ ನಿಲ್ಲುತ್ತದೆ.
ಬಳಸಿದ ಟೀ ಪುಡಿಯನ್ನು ಕಸಕ್ಕೆ ಎಸೆಯುವ ಬದಲು ಅದನ್ನು ಸ್ವಚ್ಛವಾಗಿ ತೊಳೆದು ಗಿಡದ ಬುಡಕ್ಕೆ ಹಾಕಿ. ಇದು ಗಿಡಗಳಿಗೆ ಉತ್ತಮ ಗೊಬ್ಬರವಾಗುತ್ತದೆ.