ಯಾವಾಗಲೂ ಯಂಗ್ ಆಗಿ, ಸುಂದರವಾಗಿ ಕಾಣಬೇಕು ಅನ್ನೋದು ಪ್ರತಿಯೊಬ್ಬರ ಬಯಕೆ. ಇದಕ್ಕಾಗಿ ಮೇಕಪ್ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ನಾವು ಸಾಕಷ್ಟು ಹಣ ಕೂಡ ಖರ್ಚು ಮಾಡುತ್ತೇವೆ. ಆದರೆ ಬಯಸಿದ ಫಲಿತಾಂಶ ಮಾತ್ರ ಸಿಗುವುದಿಲ್ಲ. ಹಾಗಾಗಿ ಮುಖದ ಹೊಳಪನ್ನು ಕಾಪಾಡಿಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಲು ಮನೆಯಲ್ಲೇ ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಇದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ.
ಟೋನರ್: ಮುಖದ ಅಂದ ಹೆಚ್ಚಿಸಲು ಟೋನರ್ ಬಳಸಬೇಕು. ಟೋನರ್ ಅನ್ನು ಹಚ್ಚಿಕೊಳ್ಳಲು ಕಾಟನ್ ಪ್ಯಾಡ್‌ಗಳನ್ನು ಬಳಸಿ. ಮುಖ ಮತ್ತು ಕುತ್ತಿಗೆಗೆ ನಿಧಾನವಾಗಿ ಉಜ್ಜಿರಿ. ಇದು ಚರ್ಮದ ನೈಸರ್ಗಿಕ pH ಮಟ್ಟವನ್ನು ಸರಿಪಡಿಸುತ್ತದೆ. ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಾಣು ಜೀವಿಗಳಿಂದ ಚರ್ಮವನ್ನು ರಕ್ಷಿಸುತ್ತದೆ.
ಸೌಂದರ್ಯ ವರ್ಧಕ: ಮಹಿಳೆಯರು ಸಾಮಾನ್ಯವಾಗಿ ಮಲಗುವ ಮುನ್ನ ಮುಖ ತೊಳೆದ ನಂತರ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಇದು ಮುಖದ ಚರ್ಮಕ್ಕೆ ಒಳ್ಳೆಯದಲ್ಲ. ಮುಖಕ್ಕೂ ಸ್ವಲ್ಪ ವಿಶ್ರಾಂತಿ ಬೇಕು. ಹಾಗಾಗಿ ರಾತ್ರಿ ಮಲಗುವಾಗ ಯಾವುದೇ ಉತ್ಪನ್ನವನ್ನು ಬಳಸಬೇಡಿ. ನಿದ್ರೆಯ ಸಮಯದಲ್ಲಿ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಸೌಂದರ್ಯ ವರ್ಧಕಗಳನ್ನು ಬಳಸುವುದರಿಂದ ಈ ರಂಧ್ರಗಳು ಮುಚ್ಚಲ್ಪಡುತ್ತವೆ. ಇದು ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು.
ಕೈಗಳ ಕಾಳಜಿ : ಮುಖದಂತೆಯೇ ಕೈಗಳ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ಸುಂದರವಾದ ಕೈಗಳಿಗಾಗಿ ಹ್ಯಾಂಡ್ ಕ್ರೀಮ್ ಬಳಸಬೇಕು. ಮೊದಲು ಬೆಚ್ಚಗಿನ ನೀರು ಮತ್ತು ಸಾಬೂನಿನಿಂದ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ. ನಂತರ ಸ್ವಚ್ಛವಾದ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಬಳಿಕ ಹ್ಯಾಂಡ್ ಕ್ರೀಮ್ ಹಚ್ಚಿಕೊಳ್ಳಿ.
ಕೂದಲಿನ ಆರೈಕೆ: ಮಲಗುವಾಗ ಕೂದಲನ್ನು ಹರಡಿಕೊಂಡಿರಬೇಡಿ. ಈ ರೀತಿ ಮಾಡುವುದರಿಂದ ಕೂದಲಿನ ಎಣ್ಣೆ ಮತ್ತು ಕೊಳಕು ಮುಖಕ್ಕೆ ತೊಡಕುಂಟು ಮಾಡಬಹುದು. ಮಲಗುವ ಮೊದಲು ಜಡೆ ಹಾಕಿಕೊಳ್ಳುವುದು ಉತ್ತಮ.
ಕಣ್ಣಿನ ಕ್ರೀಮ್: ಮುಖದಲ್ಲಿರುವ ಅತ್ಯಂತ ಸೂಕ್ಷ್ಮ ಮತ್ತು ಸುಂದರವಾದ ಅಂಗಗಳೆಂದರೆ ಕಣ್ಣುಗಳು. ಕಣ್ಣುಗಳು ನಮ್ಮ ಸೌಂದರ್ಯಕ್ಕೆ ಕಳಶವಿದ್ದಂತೆ. ಹಾಗಾಗಿ ಕಣ್ಣುಗಳ ಬಗ್ಗೆ ಕಾಳಜಿ ವಹಿಸಿ. ರಾತ್ರಿ ಮಲಗುವ ಮುನ್ನ ಕಣ್ಣಿನ ಹೊರಭಾಗದಲ್ಲಿ ಐ ಕ್ರೀಮ್ ಹಚ್ಚಿಕೊಳ್ಳಿ. ಇದು ಕಣ್ಣುಗಳನ್ನು ಹೈಡ್ರೀಕರಿಸುತ್ತದೆ. ಜೊತೆಗೆ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುತ್ತದೆ.