ಸುಂದರವಾಗಿ ಕಾಣಿಸಬೇಕು ಅಂದ್ರೆ ತ್ವಚೆಗೆ ಆರೈಕೆ ಮಾಡಿಕೊಳ್ಳಲೇಬೇಕು. ಬೆಳಗ್ಗೆ ಸಾಮಾನ್ಯವಾಗಿ ಎಲ್ಲರೂ ತ್ವಚೆಯ ಬಗ್ಗೆ ಕಾಳಜಿ ವಹಿಸ್ತಾರೆ. ಅದೇ ರೀತಿ ರಾತ್ರಿ ಕೂಡ ಮುಖದ ಚರ್ಮದ ಆರೈಕೆ ಮಾಡಿಕೊಳ್ಳಬೇಕು. ರಾತ್ರಿ ಮುಖವನ್ನು ಸ್ವಚ್ಛವಾಗಿ ತೊಳೆಯದೇ ಮಲಗಿದರೆ ಅದು ನಿಮ್ಮ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ತ್ವಚೆಯ ಬಗ್ಗೆ ಕಾಳಜಿ ವಹಿಸದಿದ್ದರೆ ಅಕಾಲಿಕವಾಗಿ ವಯಸ್ಸಾದಂತೆ ಕಾಣುತ್ತದೆ. 50ರಲ್ಲೂ 30 ವರ್ಷದವರಂತೆ ಕಾಣಲು ಮಲಗುವ ಮೊದಲು ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.
ತೆಂಗಿನ ಎಣ್ಣೆ: ಹೊಕ್ಕಳಿಗೆ ತೆಂಗಿನೆಣ್ಣೆ ಹಾಕಿಕೊಂಡು ಮಲಗಬೇಕು. ಈ ರೀತಿ ಮಾಡಿದರೆ ಇದರ ಪರಿಣಾಮ ತ್ವಚೆಯ ಮೇಲೂ ಕಾಣಿಸುತ್ತದೆ. ಮಲಗುವ ಮುನ್ನ ಹೊಕ್ಕುಳಿಗೆ ತೆಂಗಿನೆಣ್ಣೆ ಹಚ್ಚಿಕೊಂಡರೆ ತ್ವಚೆಯು ಮೃದು ಮತ್ತು ಹೊಳಪಿನಿಂದ ಕೂಡಿರುತ್ತದೆ. ಈ ಎಣ್ಣೆಯನ್ನು ಮುಖಕ್ಕೆ ಕೂಡ ಹಚ್ಚಿಕೊಳ್ಳಬಹುದು. ಅತಿಯಾದ ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಮುಖಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚಬೇಡಿ. ತೆಂಗಿನ ಎಣ್ಣೆಗೆ ವೃದ್ಧಾಪ್ಯವನ್ನು ತಡೆಯುವ ಗುಣಲಕ್ಷಣವಿದೆ. ಅದು ಚರ್ಮವನ್ನು ಹೈಡ್ರೀಕರಿಸುತ್ತದೆ.
ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯನ್ನು ಹೊಕ್ಕುಳಿಗೆ ಹಾಕಿಕೊಳ್ಳಬೇಕು. ಇದಕ್ಕಾಗಿ ಮೊದಲು ಬಾದಾಮಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ. ನಂತರ ಒಂದೆರಡು ಹನಿಗಳನ್ನು ಹೊಕ್ಕುಳಿನ ಮಧ್ಯದಲ್ಲಿ ಹಾಕಿಕೊಳ್ಳಿ. ಎಣ್ಣೆ ತುಂಬಾ ಬಿಸಿ ಇರದಂತೆ ನೋಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ತ್ವಚೆಗೆ ವಯಸ್ಸಾಗುವುದಿಲ್ಲ.
ಅಲೋವೆರಾ: ಮುಖದ ಚರ್ಮ ಸುಕ್ಕಾಗದಂತೆ ತಡೆಯಲು ಅಲೋವೆರಾ ಉತ್ತಮ ಆಯ್ಕೆ. ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ. ರಾತ್ರಿಯಿಡಿ ಹಾಗೇ ಬಿಡಿ. ಈ ರೀತಿ ಮಾಡುವುದರಿಂದ ಮುಖದ ಸೌಂದರ್ಯ ದುಪ್ಪಟ್ಟಾಗುತ್ತದೆ.