
ಮುಟ್ಟು ಮಹಿಳೆಯರಲ್ಲಿ ಸಂಭವಿಸುವ ಒಂದು ಸ್ವಾಭಾವಿಕ ಪ್ರಕ್ರಿಯೆ. ನಿರ್ದಿಷ್ಟ ವಯಸ್ಸಿನ ನಂತರ ಹೆಣ್ಣುಮಕ್ಕಳು ಇದನ್ನು ಎದುರಿಸಬೇಕಾಗುತ್ತದೆ. ಆದರೆ ಮುಟ್ಟಿಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳಿದ್ದು, ಇವು ಮಹಿಳೆಯರಿಗೆ ತೊಡಕಾಗಿವೆ. ಬಹುತೇಕ ಕಡೆಗಳಲ್ಲಿ ಮಹಿಳೆ ಋತುಚಕ್ರದ ಸಮಯದಲ್ಲಿ ಅಡುಗೆ ಮನೆಗೆ ಹೋಗುವಂತಿಲ್ಲ. ತಲೆಸ್ನಾನ ಮಾಡಬಾರದು, ದೇವರ ಪೂಜೆ ಮಾಡಬಾರದು ಎಂಬೆಲ್ಲ ನಿಯಮಗಳಿವೆ.
ಮುಟ್ಟಿನ ಸಮಯದಲ್ಲಿ ಮಹಿಳೆಯರು ತುಳಸಿ ಗಿಡವನ್ನು ಸ್ಪರ್ಶಿಸಬಾರದು, ತುಳಸಿ ಗಿಡಕ್ಕೆ ನೀರು ಹಾಕಬಾರದು ಎಂಬ ನಿಯಮವಿದೆ. ಈ ಆಚರಣೆಯು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಬೇರೂರಿದೆ.
ಮುಟ್ಟಾದ ಮಹಿಳೆಯರು ಗಿಡಗಳನ್ನು ಸ್ಪರ್ಷಿಸಿದರೆ ಅವು ಒಣಗಿ ಹೋಗುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇದು ಎಷ್ಟು ಸತ್ಯ ಎಂಬುದನ್ನು ತಿಳಿದುಕೊಳ್ಳಬೇಕು. ಮುಟ್ಟಿನ ಸಮಯದಲ್ಲಿ ಸ್ಪರ್ಷಿಸಿದರೆ ಗಿಡಗಳು ಬಾಡುತ್ತವೆ ಎಂದು ಮನೆಯ ಹಿರಿಯರು ಹೇಳುತ್ತಿರುತ್ತಾರೆ. ಆದರೆ ವಿಜ್ಞಾನದ ಪ್ರಕಾರ ಋತುಚಕ್ರಕ್ಕೂ ಸಸ್ಯದ ಒಣಗುವಿಕೆಗೂ ಯಾವುದೇ ಸಂಬಂಧವಿಲ್ಲ. ಸಸ್ಯಗಳು ಆರೈಕೆಯ ಕೊರತೆಯಿಂದ ಒಣಗುತ್ತವೆ.
ಸಸ್ಯಗಳು ಒಣಗಲು ನೀರಿನ ಕೊರತೆ ಮತ್ತು ಪೋಷಕಾಂಶಗಳ ಕೊರತೆಯಂತಹ ಹಲವಾರು ಕಾರಣಗಳಿರಬಹುದು. ಸಸ್ಯಗಳು ಒಣಗದಂತೆ ಉಳಿಸಿಕೊಳ್ಳಲು ಅವುಗಳ ಬೇರುಗಳು, ಎಲೆಗಳು ಮತ್ತು ಹಣ್ಣುಗಳನ್ನು ಪರೀಕ್ಷಿಸಬೇಕು. ಮಹಿಳೆಯರ ಋತುಚಕ್ರಕ್ಕೂ ಗಿಡಗಳು ಒಣಗುವುದಕ್ಕೂ ಯಾವುದೇ ಸಂಬಂಧವಿಲ್ಲ.