ಮಳೆಗಾಲವೆಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲದಲ್ಲಿ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಎಲ್ಲೆಲ್ಲೂ ಹಸಿರು. ಮಾರುಕಟ್ಟೆಗೂ ಹಸಿರು ತರಕಾರಿಗಳು ಲಗ್ಗೆ ಇಡುತ್ತವೆ. ಹಸಿರು ತರಕಾರಿ, ಸೊಪ್ಪುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ರೆ ಮಳೆಗಾಲದಲ್ಲಿ ಕೆಲವೊಂದು ತರಕಾರಿಗಳಿಂದ ದೂರ ಇರುವುದು ಒಳ್ಳೆಯದು. ತಿನ್ನುವ ಅನಿವಾರ್ಯತೆ ಎದುರಾದ್ರೆ ಮೊದಲು ಸ್ವಚ್ಛಗೊಳಿಸಿಕೊಂಡು ಸರಿಯಾಗಿ ಬೇಯಿಸಿ ತರಕಾರಿ ತಿನ್ನಿ.
ಮಳೆಗಾಲದಲ್ಲಿ ಆರ್ದ್ರತೆ ಹೆಚ್ಚಿರುತ್ತದೆ. ಸೂರ್ಯನ ಕಿರಣ ಹೆಚ್ಚಾಗಿ ಬೀಳದ ಕಾರಣ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಿರುತ್ತದೆ. ಜೊತೆಗೆ ಸೊಪ್ಪುಗಳಲ್ಲಿ ಕೀಟಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಮಳೆಗಾಲದಲ್ಲಿ ಅಣಬೆಯನ್ನು ತಿನ್ನದಿರುವುದು ಉತ್ತಮ. ಇದನ್ನು ತಿಂದ್ರೆ ಅಲರ್ಜಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಳೆಗಾಲದಲ್ಲಿ ಅಣಬೆ ತಿನ್ನುವುದರಿಂದ ಸೋಂಕು ತಗಲುವ ಸಾಧ್ಯತೆಯಿರುತ್ತದೆ.
ಮಳೆಗಾಲದಲ್ಲಿ ಆಲೂಗಡ್ಡೆ, ಹೂ ಕೋಸ್ ನಿಂದಲೂ ದೂರವಿರುವುದು ಒಳಿತು. ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಒಂದು ವೇಳೆ ಸರಿಯಾಗಿ ಜೀರ್ಣವಾಗದೆ ಹೋದಲ್ಲಿ ಹೊಟ್ಟೆಯಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.
ಪಾಲಾಕ್ ಮತ್ತು ಎಲೆಕೋಸನ್ನು ತಿನ್ನಬೇಡಿ. ಇದ್ರಲ್ಲಿ ಸಣ್ಣ ಸಣ್ಣ ಬ್ಯಾಕ್ಟೀರಿಯಾಗಳಿರುತ್ತವೆ. ಇದು ಜೀರ್ಣವಾಗುವುದೂ ನಿಧಾನ. ಸರಿಯಾಗಿ ಬೇಯದಿದ್ದಲ್ಲಿ ಹೊಟ್ಟೆ ಸಮಸ್ಯೆ ಶುರುವಾಗುತ್ತದೆ.
ಈ ಮಳೆಗಾಲದಲ್ಲಿ ಹಸಿ ತರಕಾರಿಗಳ ಸಲಾಡ್ ಕೂಡ ಬೇಡ. ಯಾಕೆಂದ್ರೆ ಬೇಯಿಸಿರದ ತರಕಾರಿಗಳಲ್ಲಿ ಸಣ್ಣ ಸಣ್ಣ ಕೀಟ ಹಾಗೂ ಬ್ಯಾಕ್ಟೀರಿಯಾಗಳಿರುತ್ತವೆ.