ಚಳಿಗಾಲದಲ್ಲಿ ಎಲ್ಲರ ನೆಚ್ಚಿನ ಪಾನೀಯವೆಂದರೆ ಚಹಾ. ಟೀ ಪ್ರಿಯರಲ್ಲಿ ವರ್ಷವಿಡೀ ಚಹಾದ ಕ್ರೇಜ್ ಇರುತ್ತದೆ. ಚಹಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳ್ತಾರೆ. ಚಹಾ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಅನೇಕ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ. ಚಹಾವು ದೇಹಕ್ಕೆ ತಾಜಾತನವನ್ನು ನೀಡುತ್ತದೆ ಮತ್ತು ಸೋಮಾರಿತನವನ್ನು ದೂರ ಮಾಡುತ್ತದೆ.
ಆರೋಗ್ಯ ತಜ್ಞರ ಪ್ರಕಾರ ದಿನಕ್ಕೆ 2-3 ಕಪ್ ಚಹಾವನ್ನು ಮಾತ್ರ ಕುಡಿಯಬೇಕು. ಇದಕ್ಕಿಂತ ಹೆಚ್ಚು ಚಹಾ ಕುಡಿದರೆ ದೇಹಕ್ಕೆ ಹಾನಿಯುಂಟಾಗುತ್ತದೆ. ಬಿಸಿ ಬಿಸಿ ಟೀ ಕುಡಿದ ತಕ್ಷಣ ತಣ್ಣೀರು ಕುಡಿಯಬಾರದು, ಹೀಗೆ ಮಾಡಿದರೆ ಹಲ್ಲು ಒಡೆಯುತ್ತದೆ ಎಂದು ಅನೇಕರು ಹೇಳುವುದನ್ನು ನೀವು ಕೇಳಿರಬಹುದು. ಈ ವಿಷಯದ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯವೇನು ಎಂದು ತಿಳಿಯೋಣ.
ಒಂದು ವರದಿಯ ಪ್ರಕಾರ ಬಿಸಿ ಚಹಾ ಕುಡಿದ ತಕ್ಷಣ ನೀರು ಕುಡಿದರೆ, ಹಲ್ಲುಗಳಲ್ಲಿ ಪೈರೋರಿಯಾದ ಅಪಾಯವಿದೆ. ಇದಲ್ಲದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಳಾಗುತ್ತವೆ. ಚಹಾ ಕುಡಿದ ಬೆನ್ನಲ್ಲೇ ನೀರು ಕುಡಿಯುವುದರಿಂದ ಆಸಿಡಿಟಿ ಮತ್ತು ಹೊಟ್ಟೆ ನೋವು ಉಂಟಾಗುತ್ತದೆ. ಚಹಾ ಮಾತ್ರವಲ್ಲ ಕಾಫಿ ಕುಡಿದ ತಕ್ಷಣ ನೀರು ಕುಡಿಯಬಾರದು. ಟೀ ಮತ್ತು ಕಾಫಿ ಎರಡರಲ್ಲೂ ಆಮ್ಲೀಯ ಗುಣವಿದ್ದು, ಇದು ಹೊಟ್ಟೆಯನ್ನು ಕೆರಳಿಸುತ್ತದೆ.
ಚಹಾ ಕುಡಿಯುವ ಮೊದಲು ನೀರು ಕುಡಿಯುವುದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಚಹಾ ಕುಡಿದ ಬಳಿಕ ಕನಿಷ್ಟ ಒಂದು ಗಂಟೆ ಕಾಲ ನೀರು ಕುಡಿಯದೇ ಇರುವುದು ಉತ್ತಮ. ಶುಂಠಿ ಚಹಾ ಕುಡಿಯುವುದರಿಂದ ಚಳಿಗಾಲದಲ್ಲಿ ಶೀತ ಮತ್ತು ಜ್ವರದಿಂದ ಪರಿಹಾರ ಸಿಗುತ್ತದೆ. ಆದರೆ ಅತಿಯಾದ ಚಹಾ ಸೇವನೆಯಿಂದ ಎದೆಯುರಿ ಉಂಟಾಗುತ್ತದೆ. ಹಾಗಾಗಿ ಚಹಾ ಸೇವನೆ ಹಿತಮಿತವಾಗಿರಲಿ.