ನಿಮ್ಮ ಆರೋಗ್ಯದ ಮೇಲೆ ಆಹಾರ ಕ್ರಮವು ಪ್ರಮುಖ ಪರಿಣಾಮಗಳನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಆಹಾರ ತಜ್ಞರು ಬೆಳಗ್ಗಿನ ಸಮಯದಲ್ಲಿ ಕೆಲ ಆಹಾರಗಳ ಸೇವನೆಯನ್ನು ನಿಷಿದ್ಧ ಎಂದಿದ್ದಾರೆ. ಏಕೆಂದರೆ ಇಂತಹ ಆಹಾರಗಳ ಸೇವನೆಯಿಂದ ನಿಮ್ಮ ಇಡೀ ದಿನದ ಆರೋಗ್ಯವು ಹದಗೆಡುವ ಸಾಧ್ಯತೆ ಇದೆ.
ಬೆಳಗ್ಗಿನ ಹೊತ್ತಲ್ಲಿ ನಮ್ಮ ಹೊಟ್ಟೆಯು ಖಾಲಿಯಾಗಿ ಇರುತ್ತದೆ, ಇಂತಹ ಸ್ಥಿತಿಯಲ್ಲಿ ನಾವು ಏನನ್ನು ತಿನ್ನುತ್ತೇವೋ ಅದು ನಮ್ಮ ಉದರದ ಒಳ ಪದರದ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತದೆ. ಇದರಿಂದ ನಿಮಗೆ ಹೊಟ್ಟೆ ಉರಿ, ಹೊಟ್ಟೆ ನೋವು, ಎದೆಯುರಿ, ಜೀರ್ಣಕ್ರಿಯೆಯಲ್ಲಿ ತೊಂದರೆ ಹೀಗೆ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು. ಹಾಗಾದರೆ ಬೆಳಗ್ಗಿನ ಹೊತ್ತಲ್ಲಿ ಯಾವೆಲ್ಲ ಆಹಾರಗಳನ್ನು ಸೇವಿಸಬಾರದು ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ.
ಅತಿಯಾದ ಮಸಾಲೆಯುಕ್ತ ಆಹಾರ ಹಾಗೂ ಕರಿದ ತಿಂಡಿಗಳು ಬೆಳಗ್ಗಿನ ಉಪಹಾರಕ್ಕೆ ಸೂಕ್ತವಲ್ಲ. ಇದರಿಂದ ನಿಮ್ಮ ಹೊಟ್ಟೆ ಹಾಳಾಗುವ ಸಾಧ್ಯತೆ ಇದೆ. ಎದೆಯುರಿ ಕೂಡ ಉಂಟಾಗಬಹುದು.
ಫೈಬರ್ ಅಂಶ ಹೆಚ್ಚಿರುವ ಆಹಾರವು ನಿಮ್ಮ ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಅತಿಯಾದ ಫೈಬರ್ಯುಕ್ತ ಆಹಾರ ಸೇವನೆ ಕೂಡ ಉದರದ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಲಬದ್ಧತೆ, ಹೊಟ್ಟೆ ನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ಹೀಗಾಗಿ ಸರಿಯಾದ ಪ್ರಮಾಣದಲ್ಲಿ ಫೈಬರ್ಯುಕ್ತ ಆಹಾರ ಸೇವನೆ ಮಾಡಿ.
ಅನೇಕರಿಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಹಾಗೂ ಚಹಾ ಸೇವನೆ ಮಾಡುವ ಅಭ್ಯಾಸ ಇರುತ್ತೆ. ಆದರೆ ಇದು ನಿಮ್ಮ ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ನಿರ್ಜಲೀಕರಣ ಹಾಗೂ ಎದೆಯುರಿ ಉಂಟಾಗಬಹುದು.
ಬೆಳಗ್ಗಿನ ಹೊತ್ತಲ್ಲಿ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಒಳ್ಳೆಯದು. ಆದರೆ ಫ್ರಿಡ್ಜ್ನಲ್ಲಿರುವ ನೀರನ್ನು ಸೇವಿಸುವುದು ಒಳ್ಳೆಯದಲ್ಲ. ಇದರಿಂದ ನಿಮ್ಮ ಜೀರ್ಣ ಕ್ರಿಯೆ ಮಟ್ಟವು ತಗ್ಗಲಿದೆ. ಇದರಿಂದ ತಿಂದ ಆಹಾರ ಬೇಗನೇ ಜೀರ್ಣವಾಗುವುದಿಲ್ಲ.
ಖಾಲಿ ಹೊಟ್ಟೆಯಲ್ಲಿ ಮದ್ಯಪಾನ ಸೇವನೆ ಆರೋಗ್ಯಕ್ಕೆ ತುಂಬಾನೇ ಮಾರಕ. ಖಾಲಿ ಹೊಟ್ಟೆಯಲ್ಲಿ ಮದ್ಯಪಾನ ಸೇವನೆಯು ನಿಮ್ಮ ಯಕೃತ್ತಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲದು. ಅಲ್ಲದೇ ಮದ್ಯವು ಬಹುಬೇಗನೆ ರಕ್ತಕ್ಕೆ ಸಂಚರಿಸುತ್ತದೆ. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಎಂದಿಗೂ ಮದ್ಯಪಾನ ಸೇವಿಸದಿರಿ.