ಮುಟ್ಟು ಶುರುವಾಗುವ ಮೊದಲು ಹುಡುಗಿಯರಲ್ಲಿ ಅದು ಏನು ಎಂಬ ಪ್ರಶ್ನೆ ಕಾಡುತ್ತದೆ. ಮುಟ್ಟು ಶುರುವಾಗ್ತಿದ್ದಂತೆ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ತವೆ. ಮುಟ್ಟಿನಲ್ಲಿ ಇಷ್ಟೊಂದು ನೋವು ಏಕೆ ಎಂಬುದರಿಂದ ಹಿಡಿದು ಮುಟ್ಟು ನಿಲ್ಲೋದು ಯಾವಾಗ ಎನ್ನುವವರೆಗೆ ಅನೇಕ ಪ್ರಶ್ನೆಗಳಿರುತ್ತವೆ.
ಹುಡುಗಿ ಈ ಎಲ್ಲ ಪ್ರಶ್ನೆಗಳಿಗೆ ತಾಯಿ ಬಳಿ ಉತ್ತರ ಹುಡುಕುವ ಪ್ರಯತ್ನ ನಡೆಸ್ತಾಳೆ. ಸಾಮಾನ್ಯವಾಗಿ ಹುಡುಗಿಯರಿಂದ ಹಿಡಿದು ಮುಟ್ಟು ನಿಲ್ಲುವ ಮಹಿಳೆಯವರೆಗೆ ಎಲ್ಲರನ್ನೂ ಕಾಡುವ ಒಂದು ಪ್ರಶ್ನೆ ಮುಟ್ಟಿನ ವೇಳೆ ಏನು ಮಾಡಬೇಕು? ಏನು ಮಾಡಬಾರದು ಎಂಬುದು.
ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರಿ ಅಥವಾ ವ್ರತ ಮಾಡ್ತಿರಿ. ಮುಟ್ಟಿನ ಸಮಯದಲ್ಲಿ ಇದನ್ನು ಅನುಸರಿಸಬೇಡಿ. ಮುಟ್ಟಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಿ. ಸರಿಯಾದ ಸಮಯದಲ್ಲಿ ಪೌಷ್ಠಿಕ ಆಹಾರವನ್ನು ನೀವು ಸೇವಿಸಬೇಕಾಗುತ್ತದೆ.
ಕಡಿಮೆ ರಕ್ತಸ್ರಾವವಾಗುವವರು ಪ್ಯಾಡ್ ಬದಲಿಸಲು ಆಲಸ್ಯ ಮಾಡ್ತಾರೆ. ಇದು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿ ನಿರ್ದಿಷ್ಟ ಸಮಯಕ್ಕೆ ಪ್ಯಾಡ್ ಬದಲಿಸುವ ಅಭ್ಯಾಸ ಮಾಡಿಕೊಳ್ಳಿ. ಇದು ಸೋಂಕಿನಿಂದ ರಕ್ಷಣೆ ನೀಡುತ್ತದೆ.
ಈ ಅವಧಿಯಲ್ಲಿ ಕಿರಿಕಿರಿ ಸಾಮಾನ್ಯ. ಸಕ್ಕರೆ ಅಥವಾ ಜಂಕ್ ಫುಡ್ ಸೇವನೆಯಿಂದ ದೂರವಿರಿ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಬೆವರಿಳಿಸುವ ವ್ಯಾಯಾಮದ ರೂಢಿ ನಿಮಗಿದ್ದರೆ ಈ ಸಮಯದಲ್ಲಿ ಅದ್ರಿಂದ ದೂರವಿರಿ. ವಾಕಿಂಗ್ ಸೇರಿದಂತೆ ಸಣ್ಣಪುಟ್ಟ ವ್ಯಾಯಾಮವನ್ನು ಮಾಡಬಹುದು.
ಫ್ಯಾಮಿಲಿ ಪ್ಲಾನಿಂಗ್ ನಲ್ಲಿರುವವರು ಮುಟ್ಟಿನ ಸಮಯದಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಬೇಡಿ. ಇದು ನಿಮ್ಮನ್ನು ತೊಂದರೆಗೆ ತಳ್ಳುತ್ತದೆ.
ಮುಟ್ಟಿನ ಸಮಯದಲ್ಲಿ ಜನನಾಂಗವನ್ನು ಸೋಪಿನಿಂದ ಸ್ವಚ್ಛಗೊಳಿಸಬೇಡಿ. ಹಾಗೆ ವೆಟ್ ಟಿಶ್ಯೂ ಬಳಸಬೇಡಿ.