ಕೆಲವು ಮಕ್ಕಳು ಹೊಟ್ಟೆಯಲ್ಲಿ ಮೂತ್ರ ತುಂಬಿ ಒಂದೆರಡು ಹನಿ ಕೆಳಗೆ ಉದುರುವ ತನಕ ಶೌಚಾಲಯಕ್ಕೆ ಹೋಗುವುದೇ ಇಲ್ಲ. ಈ ಅಭ್ಯಾಸ ಮಕ್ಕಳಲ್ಲಿ ಮಾತ್ರವಲ್ಲ ಕೆಲವೊಮ್ಮೆ ದೊಡ್ಡವರಲ್ಲೂ ಇರುತ್ತದೆ. ಹೀಗೆ ಮಾಡುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ಗೊತ್ತೇ?
ಮಲ ಹಾಗೂ ಮೂತ್ರ ವಿಸರ್ಜನೆ ನೈಸರ್ಗಿಕ ಕ್ರಿಯೆ. ಹಾಗಾಗಿ ಮೂತ್ರವನ್ನು ಕಟ್ಟಿಕೊಳ್ಳದೆ ವಿಸರ್ಜಿಸುವುದು ಬಹಳ ಮುಖ್ಯ. ನೀವು ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯುತ್ತೀರಿ ಎಂದಾದರೆ ಕನಿಷ್ಠ ಮೂರು ಗಂಟೆಗೊಮ್ಮೆ ಮೂತ್ರ ವಿಸರ್ಜನೆಗೆ ಹೋಗಲೇ ಬೇಕು.
ಮೂತ್ರ ಬಂದರೂ ತಡೆ ಹಿಡಿಯುವುದರಿಂದ ಅಲ್ಲಿನ ಸ್ನಾಯುಗಳು ದುರ್ಬಲಗೊಂಡು ಮುಂದೆ ಮೂತ್ರ ಬಂದರೂ ತಿಳಿಯದಂತಾದೀತು. ಸಮಯಕ್ಕೆ ಸರಿಯಾಗಿ ವಿಸರ್ಜನೆ ಮಾಡದಿದ್ದರೆ ಕಿಡ್ನಿಯ ವೈಫಲ್ಯಕ್ಕೂ ಕಾರಣವಾದೀತು.
ಕೆಲವರಿಗೆ ಇದೊಂದು ದೀರ್ಘಕಾಲೀನ ಸಮಸ್ಯೆಯಾಗಿ ಕಾಡಬಹುದು. ಹೊಟ್ಟೆಯ ಕೆಳಭಾಗದಲ್ಲಿ ನೋವು ಕಂಡು ಬರಬಹುದು. ಒಮ್ಮೆ ಮೂತ್ರ ವಿಸರ್ಜಿಸಿದ ತಕ್ಷಣ ಮತ್ತೆ ಮೂತ್ರ ಬಂದಂತಾಗುವ ಸಮಸ್ಯೆಗಳೂ ಕಂಡು ಬಂದಾವು. ಹಾಗಾಗಿ ಎಂಥ ಸನ್ನಿವೇಶವಿದ್ದರೂ ನೈಸರ್ಗಿಕ ಕರೆಗಳಿಗೆ ಮೊದಲು ಓಗೊಡಲು ಮರೆಯದಿರಿ.