alex Certify ಅರಣ್ಯ ಭೂಮಿ ಒತ್ತುವರಿ ಎಂದು ಯಾರನ್ನೂ ತೆರವುಗೊಳಿಸಬೇಡಿ : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಣ್ಯ ಭೂಮಿ ಒತ್ತುವರಿ ಎಂದು ಯಾರನ್ನೂ ತೆರವುಗೊಳಿಸಬೇಡಿ : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಕೋಲಾರ : ಅರಣ್ಯ ಭೂಮಿ ಒತ್ತುವರಿ ಎಂದು ಯಾರನ್ನೂ ತೆರವುಗೊಳಿಸಬೇಡಿ ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೋಲಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.ರೆವೆನ್ಯು ಮತ್ತು ಅರಣ್ಯ ಭೂಮಿ ಗುರುತಿಸುವ ವಿಚಾರದಲ್ಲಿ ಆಗುತ್ತಿರುವ ತೊಂದರೆಗಳನ್ನು, ಗೊಂದಲಗಳನ್ನು ಪರಿಹರಿಸಲು ಎರಡೂ ಇಲಾಖೆಯ ಜಂಟಿ ಸರ್ವೆ ಮಾಡಿ ಜಿಲ್ಲಾಧಿಕಾರಿಗಳು ವರದಿ ನೀಡಬೇಕು ಎಂದರು. ಈ ಸಮಸ್ಯೆ ರಾಜ್ಯ ಮಟ್ಟದಲ್ಲೂ ಇರುವುದರಿಂದ ವಿಧಾನಸೌಧದಲ್ಲಿ ಪ್ರತ್ಯೇಕ ಉನ್ನತ ಮಟ್ಟದ ಸಭೆ ಕರೆಯುತ್ತೇನೆ. ಅಲ್ಲಿಯವರೆಗೂ ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ಎಂದು ಯಾರನ್ನೂ ತೆರವುಗೊಳಿಸಬಾರದು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಬರಗಾಲದ ಸಮಸ್ಯೆ ಜಿಲ್ಲೆಯಲ್ಲಿ ಯಾವ ಪ್ರಮಾಣದಲ್ಲಿದೆ? ಎಷ್ಟು ಗ್ರಾಮಗಳಲ್ಲಿ ಟ್ಯಾಂಕರ್ ನೀರು ನೀಡಲಾಗುತ್ತಿದೆ ಎಂಬ ಮಾಹಿತಿ ಒದಗಿಸಬೇಕು. ಇತರೆ ಯಾವುದೇ ನೀರಿನ ಮೂಲಗಳು ಇಲ್ಲದಿದ್ದಾಗ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಬೋರ್ ವೆಲ್ ಕೊರೆಸಲು ಅವಕಾಶ ಮಾಡಿಕೊಳ್ಳಬಹುದು ಎಂದರು.

ಮಲದ ಗುಂಡಿಗೆ ಮಕ್ಕಳನ್ನು ಇಳಿಸಿ ಶುಚಿಗೊಳಿಸಿದ ಪ್ರಕರಣದಲ್ಲಿ ಮೂವರನ್ನು ಮಾತ್ರ ಜೈಲಿಗೆ ಕಳುಹಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳನ್ನು ಏಕೆ ಬಂಧಿಸಿಲ್ಲ? ಅವರನ್ನು ತಕ್ಷಣ ಬಂಧಿಸಬೇಕು. ಇದೊಂದು ಕ್ರೂರ ಕೃತ್ಯ. ಇಂತಹುದ್ದನ್ನು ನಾವು ಅಪ್ಪಿತಪ್ಪಿಯೂ ಸಹಿಸುವುದಿಲ್ಲ. ಎರಡು ದಿನಗಳಲ್ಲಿ ಉಳಿದಿಬ್ಬರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದರು.

ಈ ಘಟನೆ ಇಡೀ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಒಂದು ಪಾಠ. ಯಾವುದೇ ಕಾರಣಕ್ಕೂ ಇದು ಮರುಕಳಿಸಬಾರದು. ವಸತಿ ಶಾಲೆಗಳ ಒಳಗೆ ಪೋಷಕರು ಪ್ರವೇಶಿಸಲು ಅವಕಾಶ ನೀಡಬೇಕು. ಇದರಿಂದ ಪೋಷಕರಿಗೆ ವಸತಿ ಶಾಲೆಗಳ ಗುಣಮಟ್ಟ ಗೊತ್ತಾಗುತ್ತದೆ. ಹೀಗೆ ಮಾಡುವುದರಿಂದ ವಸತಿ ಶಾಲೆಗಳು ಜೈಲುಗಳು ಎನ್ನುವ ಭಾವನೆ ಹೋಗುತ್ತದೆ.
ನನಗೆ ದಲಿತ ಚಳವಳಿಗಳ ಜತೆ ಒಡನಾಟ ಮೊದಲೂ ಇತ್ತು, ಈಗಲೂ ಇದೆ, ಸಾಯುವವರೆಗೂ ಇರುತ್ತದೆ. ಹಿಂದೆ “ಸರಾಯಿ ಬೇಡ-ವಸತಿ ಶಾಲೆ ಬೇಕು” ಎನ್ನುವುದು ದಲಿತ ಚಳವಳಿಯ ಘೋಷಣೆಯಾಗಿತ್ತು. ಅದಕ್ಕಾಗೇ ನಾನು ಹೋಬಳಿಗೊಂದು ವಸತಿ ಶಾಲೆ ಆರಂಭಿಸಿದೆ. ಈ ಶಾಲೆಗಳಲ್ಲಿ ಗುಣಮಟ್ಟ ಹೆಚ್ಚಿಸಬೇಕು. ಶಿಕ್ಷಕರಿಗೆ ತರಬೇತಿ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂದರು.

ದೇವಸ್ಥಾನದ ಮತ್ತು ವಕ಼್ಫ್ ಬೋರ್ಡ್ಗೆ ಸಂಬಂಧಪಟ್ಟ ಸ್ಥಳಗಳು, ಜಮೀನು ಆಯಾ ಆಯಾ ಸಂಸ್ಥೆಗೆ ಹೋಗಬೇಕು. ಇವರ ಜಾಗ ಅವರಿಗೆ ಅವರ ಜಾಗ ಇವರಿಗೆ ಹೋಗದಂತೆ, ತಾಂತ್ರಿಕ ದಾಖಲಾತಿಗಳ ಗೊಂದಲ ಉಂಟಾಗದಂತೆ ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ವಿಶ್ವಕರ್ಮ ಯೋಜನೆ ಸೇರಿದಂತೆ ಯಾವುದೇ ಯೋಜನೆಗಳಲ್ಲೂ ನಿಯಮಾನುಸಾರ ಎಲ್ಲಾ ಜಾತಿ ಧರ್ಮದವರಿಗೂ ಅವಕಾಶ ನೀಡಬೇಕು.ಕೋಲಾರ ಜಿಲ್ಲೆಯಲ್ಲಿ ಅಪರಾಧಗಳ ಹೆಚ್ಚಳ ಆದರೆ ನಾನು ಸಹಿಸಲ್ಲ. ಕೋಲಾರ ಅಪರಾಧ ಮುಕ್ತ ಆಗಬೇಕು. ಚಾಳಿಬಿದ್ದ ಆರೋಪಿಗಳನ್ನು ಗಡಿಪಾರು ಮಾಡುವುದೂ ಸೇರಿದಂತೆ ಇತರೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...