ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿರುವ ಹೆಸರಾಂತ ದೇಗುಲಗಳಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯವೂ ಒಂದು. ತನ್ನದೇ ಆದ ಕಾರಣಿಕ ಶಕ್ತಿಯ ಮೂಲಕ ಇಲ್ಲಿ ನೆಲೆ ನಿಂತ ಮಹಾಲಿಂಗೇಶ್ವರ ದೇವರ ಭಕ್ತಗಣ ಕೇವಲ ಜಿಲ್ಲೆ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಇದೆ. ಇಲ್ಲಿಯ ಮಹಾಲಿಂಗೇಶ್ವರ ದೇವಾಲಯ ಈ ಪ್ರದೇಶದ ಪುರಾತನ ದೇವಾಲಯಗಳಲ್ಲೊಂದು. ಸುತ್ತಲೂ ದಿಬ್ಬದ ಪ್ರಾಕಾರ ಇರುವ ಈ ದೇವಾಲಯ ಗಜಪೃಷ್ಠಾಕಾರದ್ದಾಗಿದೆ.
ಹಿಂದೊಮ್ಮೆ ಕಾಶಿಯಿಂದ ಬರುತ್ತಿದ್ದ ವಿಪ್ರನೊಬ್ಬ ಇಲ್ಲಿ ಭಂಡಾರಿ ಹಿತ್ತಿಲು ಎಂದು ಆಗ ಕರೆಯುತ್ತಿದ್ದ ಸ್ಥಳದಲ್ಲಿ ತಾನು ಹೊತ್ತು ತಂದ ಶಿವಲಿಂಗವನ್ನಿಟ್ಟು ಪೂಜಿಸಿದನೆಂದೂ ಅವನು ಹಾಗೆಯೇ ನಿದ್ದೆ ಹೋಗಿ ಎಚ್ಚೆತ್ತು ಮುಂದಿನ ಪ್ರಯಾಣಕ್ಕೆ ಅಣಿಯಾಗಿ ಆ ಲಿಂಗವನ್ನು ಎತ್ತಲು ಪ್ರಯತ್ನಿಸಿದಾಗ ಕದಲಲಿಲ್ಲವೆಂದೂ ಪ್ರತೀತಿ. ಆಗ ಅವನು ಇಲ್ಲಿಯ ಬಂಗರಾಜನಿಗೆ ತನ್ನ ಕಷ್ಟವನ್ನು ಹೇಳಿಕೊಂಡ ಅವನ ಸೇವಕರಿಂದಾಗಲೀ, ಅವನು ಕಳುಹಿಸಿದ ಪಟ್ಟದ ಆನೆಯಿಂದಾಗಲೀ ಆ ಶಿವಲಿಂಗನ್ನು ಅಲುಗಾಡಿಸಲಾಗಲಿಲ್ಲ. ಆನೆಯೇ ಮೃತ ಹೊಂದಿ ಅದರ ಅಂಗಾಂಗಗಳು ಛಿದ್ರವಾಗಿ ಸೀಮೆಯಲ್ಲೆಲ್ಲ ಚೆಲ್ಲಿ ಬಿದ್ದುವು ಎಂದು ನಂಬಿಕೆ ಇದೆ.
ಹೀಗೆ ಶಿವಲಿಂಗ ಹೂತ ಊರೆ ಹೂತೂರು, ಪುತ್ತೂರು ಆಗಿದ್ದಿರಬಹುದೆಂದು ಒಂದು ಊಹೆ.
ಮಹಾಲಿಂಗೇಶ್ವರ ದೇವಾಲಯದ ಪೂರ್ವ ದಿಕ್ಕಿಗೆ ವಿಶಾಲವಾದ ತೇರುಗದ್ದೆ, ಪಶ್ಚಿಮಕ್ಕೆ ದೊಡ್ಡ ಕೆರೆ. ದೇವಾಲಯದ ಪ್ರದಕ್ಷಿಣ ಪಥದಲ್ಲಿ ಪರಿವಾರ ದೇವತೆಗಳ ಗುಡಿಗಳೂ, ದೈವಗಳ ಗುಡಿಗಳೂ ಇವೆ. ಪ್ರತಿ ವರ್ಷ ಎಪ್ರಿಲ್ 10 ರಂದು ಧ್ವಜಾರೋಹಣ ಆಗಿ ಒಂಬತ್ತು ದಿನಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿ ಪುತ್ತೂರು ಎಂದು ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಈ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಈ ಪಟ್ಟಣದ ಹೆಸರಿಗೂ ನಂಟಿದೆ. ಪುತ್ತೂರು ಹಿಂದೆ “ಬಂಗ” ವಂಶದ ಅರಸರ ರಾಜಧಾನಿಯಾಗಿತ್ತು.
ಹಿಂದೆ ಈ ದೇವಾಲಯ ಹಿಂಭಾಗದಲ್ಲಿ ಭಾರೀ ದೊಡ್ಡ ಕೆರೆಯನ್ನು ಮಾಡಲಾಗಿತ್ತು. ಆದರೆ, ಅದರ ಆಳ ಎಷ್ಟೇ ಆದರೂ ನೀರು ದೊರಕಲೇ ಇಲ್ಲ. ಇದಕ್ಕಾಗಿ ದೇವಾಲಯದ ಆಡಳಿತ ವರ್ಗ ಸಾವಿರಾರು ಜನರಿಗೆ ಕೆರೆಯ ತಳದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದರು. ಜನರೆಲ್ಲರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿತಂತೆ. ಸೇರಿದ ಜನರೆಲ್ಲ ಎದ್ದು ಹೊರಗೆ ಓಡಿದರು. ಅವರ ಎಲೆಯಲ್ಲಿದ್ದ ಅನ್ನದ ಅಗಳುಗಳೇ ಮುತ್ತುಗಳಾಗಿ ಬೆಳೆದವಂತೆ. ಮುತ್ತುಗಳು ಬೆಳೆದ ಊರು -“ಮುತ್ತೂರು” ಎಂದಾಗಿ, ಕ್ರಮೇಣ ಜನರ ಬಾಯಲ್ಲಿ “ಪುತ್ತೂರು” ಎಂದಾಯಿತೆಂದು ಪ್ರತೀತಿ.