ಚಿಕಿತ್ಸೆಗಾಗಿ ಆಸ್ಪತ್ರೆ ಅಥವಾ ಕ್ಲಿನಿಕ್‌ಗೆ ಹೋದಾಗ ತಪಾಸಣೆ ಸಂದರ್ಭದಲ್ಲಿ ವೈದ್ಯರು ನಿಮ್ಮ ನಾಲಿಗೆಯನ್ನು ತೋರಿಸಲು ಹೇಳ್ತಾರೆ. ವೈದ್ಯರೇಕೆ ನಾಲಿಗೆ ನೋಡ್ತಾರೆ ಅನ್ನೋ ಪ್ರಶ್ನೆ ಮೂಡೋದು ಸಹಜ. ವಾಸ್ತವವಾಗಿ ನಾಲಿಗೆ ನಮ್ಮಲ್ಲಿರುವ ಕಾಯಿಲೆಗಳನ್ನು ಬಿಚ್ಚಿಡುತ್ತದೆ. ನಾವು ಅನಾರೋಗ್ಯಕ್ಕೆ ತುತ್ತಾದಾಗ ನಮ್ಮ ನಾಲಿಗೆ ತಿಳಿ ಗುಲಾಬಿ ಬದಲು ಬೇರೆ ಬಣ್ಣಕ್ಕೆ ಬದಲಾಗುತ್ತದೆ.
ನಾಲಿಗೆಯ ಬಣ್ಣವು ನೀಲಿ ಅಥವಾ ನೇರಳೆ ಬಣ್ಣಕ್ಕೆ ತಿರುಗಿದರೆ ಅದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಸೂಚಿಸುತ್ತದೆ. ಹೃದಯವು ಸರಿಯಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ರಕ್ತದಲ್ಲಿ ಆಮ್ಲಜನಕದ ಕೊರತೆ ಇರುತ್ತದೆ. ಚಹಾ ಅಥವಾ ಕಾಫಿಯನ್ನು ಹೆಚ್ಚು ಕುಡಿಯುವವರ ನಾಲಿಗೆ ಕಂದು ಬಣ್ಣಕ್ಕೆ ತಿರುಗಿರುತ್ತದೆ. ಸಿಗರೇಟ್, ಬೀಡಿ ಸೇದುವ ಚಟವಿರುವವರು ಕೂಡ ಕಂದು ಬಣ್ಣದ ನಾಲಿಗೆಯನ್ನು ಹೊಂದಿರುತ್ತಾರೆ. ಹಾಗಾಗಿ ಈ ಅಭ್ಯಾಸಗಳನ್ನು ಬಿಡುವುದು ಒಳ್ಳೆಯದು.
ನಿಮ್ಮ ನಾಲಿಗೆಯ ಬಣ್ಣವು ಗುಲಾಬಿ ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ, ಇದರರ್ಥ ದೇಹದಲ್ಲಿ ಸಾಕಷ್ಟು ವಿಟಮಿನ್ ಬಿ 12 ಮತ್ತು ಫೋಲಿಕ್ ಆಮ್ಲದ ಕೊರತೆಯಿದೆ ಎಂದು. ಇದರಿಂದ ನಾಲಿಗೆಯಲ್ಲಿ ಕೆಂಪು ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ನಾಲಿಗೆ ಬಿಳಿಯಾಗಿದ್ದರೆ ನೀವು ಬಾಯಿಯನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿಲ್ಲ ಎಂದರ್ಥ. ಈ ಕಾರಣದಿಂದಾಗಿ ಬಿಳಿ ಕೊಳಕು ಪದರವು ನಾಲಿಗೆ ಮೇಲೆ ನೆಲೆಗೊಳ್ಳಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಜ್ವರ ಅಥವಾ ಲ್ಯುಕೋಪ್ಲಾಕಿಯಾದಿಂದಾಗಿ ನಾಲಿಗೆ ಬಿಳಿಯಾಗಬಹುದು.
ನಿಮ್ಮ ನಾಲಿಗೆಯ ಬಣ್ಣ ಹಳದಿಯಾಗಿದ್ದರೆ ದೇಹದಲ್ಲಿ ಪೌಷ್ಟಿಕಾಂಶದ ಅಂಶಗಳ ಕೊರತೆಯಿದೆ ಎಂದರ್ಥ. ಯಕೃತ್ತು ಅಥವಾ ಹೊಟ್ಟೆಯಲ್ಲಿನ ಸಮಸ್ಯೆಗಳಿಂದಾಗಿ ನಾಲಿಗೆ ಮೇಲೆ ಹಳದಿ ಪದರ ಆವರಿಸಿಕೊಳ್ಳುತ್ತದೆ. ನಾಲಿಗೆ ಕಪ್ಪಾಗುವುದು ಗಂಭೀರ ಕಾಯಿಲೆಗಳ ಸಂಕೇತ. ಇದು ಕ್ಯಾನ್ಸರ್‌ನ ಸೂಚನೆಯೂ ಆಗಿರಬಹುದು. ಆಗಾಗ್ಗೆ ಶಿಲೀಂಧ್ರಗಳ ಸೋಂಕು ಮತ್ತು ಹುಣ್ಣುಗಳಿಂದಾಗಿ, ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೆಚ್ಚು ಧೂಮಪಾನ ಮಾಡುವವರೂ ಈ ಸಮಸ್ಯೆಯನ್ನು ಎದುರಿಸುತ್ತಾರೆ.