ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಅಕ್ರಮವಾಗಿ ಮದುವೆಯಾಗಿದ್ದು, ಅವರಿಗೆ ಮಕ್ಕಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತಾಗಿ ಮಾತನಾಡಿದ ಪ್ರಸನ್ನಾನಂದ ಸ್ವಾಮೀಜಿ, ನನ್ನ ಮೇಲೆ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ಯಾವುದೇ ಆರೋಪವನ್ನು ಸಾಕ್ಷ್ಯ ಸಹಿತ ಸಾಬೀತು ಮಾಡಿದರೆ ಸಮಾಜ ಹೇಳಿದಂತೆ ಕೇಳುತ್ತೇನೆ. ಮದುವೆಯಾಗಿ ಮಕ್ಕಳಿದ್ದಾರೆ ಎಂಬ ಆರೋಪ ಶುದ್ಧ ಸುಳ್ಳು. ಭಕ್ತರಿಗೆ ಸಂಶಯವಿದ್ದರೆ ಡಿಎನ್ಎ ಪರೀಕ್ಷೆಗೆ ಒಳಪಡಿಸಲು ಸಿದ್ಧವಾಗಿದ್ದೇನೆ ಎಂದು ಸವಾಲು ಹಾಕಿದ್ದಾರೆ.
ರಾಜನಹಳ್ಳಿಯ ಗುರುಪೀಠ ಆವರಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಅವರು ಸ್ಪಷ್ಟೀಕರಣ ನೀಡಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಮದುವೆಯಾಗಿದೆ, ಮಕ್ಕಳಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಭಕ್ತರಿಗೆ ಸಂಶಯವಿದ್ದರೆ ಡಿಎನ್ಎ ಪರೀಕ್ಷೆಗೆ ಒಳಪಡಲು ಸಿದ್ಧವಿದ್ದೇನೆ ಎಂದು ಹೇಳಿದ್ದಾರೆ.
ಲೋಕೋಪಯೋಗಿ ಸಚಿವ ಹಾಗೂ ವಾಲ್ಮೀಕಿ ಸಮಾಜದ ನಾಯಕ ಸತೀಶ ಜಾರಕಿಹೊಳಿ ಮಾತನಾಡಿ, ತಮ್ಮ ಮೇಲೆ ಬಂದಿರುವ ಆರೋಪವನ್ನು ಸ್ವಾಮೀಜಿ ಅಲ್ಲಗಳಿದಿದ್ದಾರೆ. ಅವರು ಈ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ಸ್ವಾಮೀಜಿ ಮತ್ತು ಆ ಮಕ್ಕಳ ಡಿಎನ್ಎ ಪರೀಕ್ಷೆಯನ್ನು ಮಾಡಿಸಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಡಿಎನ್ಎ ಪರೀಕ್ಷೆಯನ್ನು ಖಾಸಗಿಯಾಗಿ ಮಾಡಿಸಬೇಕೆ ಅಥವಾ ಕಾನೂನಾತ್ಮಕವಾಗಿ ಮಾಡಿಸಬೇಕೆಂಬುದರ ಬಗ್ಗೆ ಚರ್ಚೆ ಮಾಡೋಣ ಎಂದು ತಿಳಿಸಿದ್ದಾರೆ.