ಅತ್ಯಾಚಾರ ಪ್ರಕರಣವೊಂದರ ಆರೋಪಿ ಜಾಮೀನು ಅರ್ಜಿ ವಿಚಾರಣೆ ವೇಳೆ ಡಿಎನ್ಎ ಪರೀಕ್ಷೆ ಕುರಿತಂತೆ ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಡಿಎನ್ಎ ಪರೀಕ್ಷೆಯೇ ಅಂತಿಮ ಸಾಕ್ಷ್ಯವಲ್ಲ. ಅದು ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂಬುದನ್ನು ದೃಢೀಕರಿಸುವುದಕ್ಕಷ್ಟೇ ನಡೆಸಲಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಪಕ್ಕದ ಮನೆಯಲ್ಲಿ ವಾಸವಾಗಿದ್ದ ಬಾಲಕಿ ಮೇಲೆ 10 ದಿನಗಳ ಕಾಲ ಅತ್ಯಾಚಾರವೆಸಗಿ ಬಂಧಿತನಾಗಿದ್ದ ಮುಂಬೈ ಮೂಲದ ವ್ಯಕ್ತಿ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶ ಭಾರತಿ ಡಾಂಗ್ರೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆರೋಪಿಯ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದ್ದಾರೆ.
ಡಿಎನ್ಎ ಪರೀಕ್ಷೆ ಒಂದೊಮ್ಮೆ ನೆಗೆಟಿವ್ ಬಂದ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಹೇಳಿರುವುದನ್ನೆಲ್ಲಾ ಸುಳ್ಳು ಎನ್ನಲಾಗುವುದಿಲ್ಲ. ಆಕೆ ತನಿಖಾಧಿಕಾರಿ ಮುಂದೆ ಸಿ.ಆರ್.ಪಿ.ಸಿ. ಸೆಕ್ಷನ್ 164 ರಡಿ ತನ್ನ ಹೇಳಿಕೆ ದಾಖಲಿಸಿರುತ್ತಾಳೆ. ಬಾಲಕಿಗೆ ಆರೋಪಿ ಹಣದ ಆಮಿಷದ ಜೊತೆಗೆ ಬೆದರಿಕೆ ಒಡ್ಡಿ ಅತ್ಯಾಚಾರವೆಸಗಿದ್ದಾನೆ. ಬಾಲಕಿ ಗರ್ಭಿಣಿಯಾದ ಬಳಿಕವೇ ಆತನ ಕೃತ್ಯ ಬಯಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.