ನವದೆಹಲಿ: ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಶನಿವಾರ ಕಾಂಗ್ರೆಸ್ ಪಕ್ಷದೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ತಮ್ಮ ಮೈತ್ರಿಯನ್ನು ಗಟ್ಟಿಗೊಳಿಸಿದೆ.
ಒಪ್ಪಂದದ ಪ್ರಕಾರ, ಡಿಎಂಕೆ ತಮಿಳುನಾಡಿನಲ್ಲಿ 9 ಸ್ಥಾನಗಳನ್ನು ಮತ್ತು ಪುದುಚೇರಿಯಲ್ಲಿ 1 ಸ್ಥಾನವನ್ನು ಕಾಂಗ್ರೆಸ್‌ಗೆ ಹಂಚಿಕೆ ಮಾಡಿದೆ. ಚುನಾವಣಾ ಸಮರಕ್ಕೆ ಸಜ್ಜಾಗುತ್ತಿರುವಾಗ ಎರಡು ಪಕ್ಷಗಳ ನಡುವಿನ ಕಾರ್ಯತಂತ್ರದ ಸಹಯೋಗ ಇದಾಗಿದೆ.
ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಟಿಎನ್‌ಸಿಸಿ ಮುಖ್ಯಸ್ಥ ಕೆ. ಸೆಲ್ವಪೆರುಂತಗೈ, ಎಐಸಿಸಿ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ಅಜೋಯ್ ಕುಮಾರ್ ಅವರ ಸಮ್ಮುಖದಲ್ಲಿ ಒಪ್ಪಂದವನ್ನು ಅಂತಿಮಗೊಳಿಸಿದರು.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ವೇಣುಗೋಪಾಲ್, ಡಿಎಂಕೆ ನೇತೃತ್ವದ ಒಕ್ಕೂಟವು ತಮಿಳುನಾಡು ಮತ್ತು ಪುದುಚೇರಿಯಲ್ಲಿ ಎಲ್ಲಾ 40 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ‘ಬಾಂಧವ್ಯ’ ಅಖಂಡವಾಗಿದೆ ಎಂದು ಹೇಳಿದರು.