ಚೆನ್ನೈ: ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ವ್ಯಂಗ್ಯವಾಡಿದ ಡಿಎಂಕೆ ವಕ್ತಾರ ಕೆ.ಎಸ್. ರಾಧಾಕೃಷ್ಣನ್ ಅವರನ್ನು ಅಮಾನತು ಮಾಡಲಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ ಅವರು ಡಿಎಂಕೆಯಲ್ಲಿ ರಾಧಾಕೃಷ್ಣನ್ ಹೊಂದಿರುವ ಎಲ್ಲಾ ಹುದ್ದೆಗಳಿಂದ ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಧಾಕೃಷ್ಣನ್ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದು, ಖರ್ಗೆಯವರ ತಿರುಚಿದ ಫೋಟೋ ಹಂಚಿಕೊಂಡಿದ್ದರು. ಮನಮೋಹನ್ ಸಿಂಗ್ 2.0 ಆಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆಗಳು. ಗಾಂಧಿ ಕುಟುಂಬಕ್ಕೆ ಮನಮೋಹನ್ ಸಿಂಗ್ ಕೈಗೊಂಬೆಯಾಗಿದ್ದರು. ಖರ್ಗೆ ಕೂಡ ಮಾಜಿ ಪ್ರಧಾನಿಯನ್ನೇ ಅನುಕರಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಮಲ್ಲಿಕಾರ್ಜುನ ಖರ್ಗೆಯವರಿಗೆ ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಸಂಸದೆ ಕನಿಮೌಳಿ ಹಾಗೂ ಸಂಸದೀಯ ಪಕ್ಷದ ನಾಯಕ ಟಿ.ಆರ್. ಬಾಲು ಅಭಿನಂದಿಸಿ ಶುಭ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಸಾಮಾಜಿಕ ಮಾಧ್ಯಮದಲ್ಲಿ ಖರ್ಗೆಯವರನ್ನು ಲೇವಡಿ ಮಾಡಿದ್ದು ವಿರೋಧಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.