ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಟ ಮತ್ತು ‘ಬೊಂಬಾಟ್ ಭೋಜನ’ ಖ್ಯಾತಿಯ ಸಿಹಿಕಹಿ ಚಂದ್ರು ಬಾಲ್ಯದ ಗೆಳೆಯರು. ಈ ಹಿಂದೆ ಖ್ಯಾತ ನಟ ರಮೇಶ್ ಅರವಿಂದ್ ಅವರು ನಡೆಸಿಕೊಡುವ ‘ ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದ ವೇಳೆ ಆಗಮಿಸಿದ್ದ ಸಿಹಿ ಕಹಿ ಚಂದ್ರು, ತಮ್ಮಿಬ್ಬರ ಬಾಲ್ಯದ ಹಾಗೂ ಕಾಲೇಜು ದಿನಗಳನ್ನು ಸ್ಮರಿಸಿಕೊಂಡಿದ್ದರು.
ಇದೀಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿಹಿಕಹಿ ಚಂದ್ರು ನಡೆಸಿಕೊಡುವ ‘ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರೆಕಾಳು ಚಿತ್ರಾನ್ನ ಸವಿದಿದ್ದಾರೆ. ತಮ್ಮ ಆತ್ಮೀಯ ಗೆಳೆಯ ಸಿಹಿಕಹಿ ಚಂದ್ರು ಆಹ್ವಾನದ ಮೇರೆಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗಿ ಶಿವಕುಮಾರ್ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
‘ಆಹಾರವು ಆತ್ಮೀಯತೆ, ಸ್ನೇಹ, ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಆತ್ಮೀಯ ಗೆಳೆಯನಾದ ಸಿಹಿಕಹಿ ಚಂದ್ರು ಆಹ್ವಾನದ ಮೇರೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರೆಕಾಳು ಚಿತ್ರಾನ್ನವನ್ನು ಸವಿದೆ’ ಎಂದು ಡಿ.ಕೆ. ಶಿವಕುಮಾರ್ ವಿಡಿಯೋ ಸಹಿತ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.