ಬೆಂಗಳೂರು : ಡಿ.ಕೆ ಸುರೇಶ್ ದೇಶ ವಿಭಜನೆಯ ಮಾತನಾಡಿ ಕರ್ನಾಟಕಕ್ಕೆ ಕಪ್ಪು ಮಸಿ ಬಳಿದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ಧಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದ ಬಿ.ವೈ ವಿಜಯೇಂದ್ರ ಬಿಜೆಪಿಗರ ಮರ್ಯಾದೆ ಪ್ರಶ್ನಿಸಿರುವ ಮಾನ್ಯ ಡಿಕೆ ಶಿವಕುಮಾರ್ ಅವರೇ, ಮೊನ್ನೆ ನಿಮ್ಮ ಮುಖ್ಯಮಂತ್ರಿಗಳು ರಾಷ್ಟ್ರಪತಿಗಳಿಗೆ ಏಕವಚನ ಬಳಸುವ ಮೂಲಕ ರಾಜ್ಯದ ಮಾನ ಕಳೆದಿದ್ದಾರೆ, ಅದರ ಹಿಂದೆಯೇ ನಿಮ್ಮ ಸಹೋದರ ಡಿ.ಕೆ ಸುರೇಶ್ ಅವರು ತಾವೊಬ್ಬ ಸಂಸದ ಎನ್ನುವುದನ್ನೂ ಮರೆತು ದೇಶ ವಿಭಜನೆಯ ಮಾತನಾಡಿ ಕರ್ನಾಟಕಕ್ಕೆ ಕಪ್ಪು ಮಸಿ ಬಳಿದಿದ್ದಾರೆ, ಸಾಲದು ಎಂಬಂತೆ ಹಾಸನದಲ್ಲಿ ಮಾಧ್ಯಮ ಗೋಷ್ಠಿ ಕರೆದು ನಿಮ್ಮ ಪಕ್ಷದ ಮಾಜಿ ಸಚಿವ ಬಿ.ಶಿವರಾಮ್ ಅವರು ಅಭಿವೃದ್ಧಿಯ ಬಾಗಿಲು ಮುಚ್ಚಿ ಪರ್ಸಂಟೇಜ್ ದಂಧೆಗಿಳಿದಿರುವ ನಿಮ್ಮ ಸರ್ಕಾರದ ಯೋಗ್ಯತೆಯನ್ನು ಜಗಜ್ಜಾಹೀರು ಮಾಡಿದ್ದಾರೆ. ಈಗ ಹೇಳಿ ಮರ್ಯಾದೆ ಯಾರಿಗಿದೆ ಎಂದು ?
ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳ ಶೇ.10 % ಭಾಗವನ್ನೂ 60 ವರ್ಷಗಳ ಕಾಲ ಆಡಳಿತ ನಡೆಸಿದ ನಿಮ್ಮ ಕಾಂಗ್ರೆಸ್ ನೀಡಲಾಗಿಲ್ಲ ಎಂಬುದಕ್ಕೆ ನೂರಾರು ನಿದರ್ಶನಗಳಿವೆ. ನಿಮ್ಮ ವೈಫಲ್ಯ, ಆಡಳಿತದ ಅರಾಜಕತೆಯ ಸ್ಥಿತಿಯನ್ನು ಮರೆಮಾಚಲು ಹೋಗಿ ಕೇಂದ್ರದ ಮೇಲೆ ಗೂಬೆ ಕೂರಿಸಲು ಹೋಗಬೇಡಿ, ಅದು ನಿಮಗೇ ತಿರುಗುಬಾಣವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ಧಾಳಿ ನಡೆಸಿದ್ದಾರೆ.