
ರಾಮನಗರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿರುವುದಕ್ಕೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಟಾಂಗ್ ಕೊಟ್ಟಿದ್ದಾರೆ.
ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ಕುಟುಂಬದವರು. ಅವರಿಗೆ ಇರುವಷ್ಟು ಬುದ್ಧಿ, ತಿಳಿವಳಿಕೆ ರಾಜ್ಯದಲ್ಲಿ ಯಾರಿಗೂ ಇಲ್ಲ. ರಾಜ್ಯಕ್ಕಾಗಿ, ರಾಷ್ಟ್ರಕ್ಕಾಗಿ ಕುಮಾರಸ್ವಾಮಿಯವರು ಏನು ಹೇಳುತ್ತಾರೆಯೋ ಅದನ್ನು ಕೇಳಬೇಕು. ಪ್ರಶ್ನಿಸಬಾರದು ಎಂದು ಟಾಂಗ್ ಕೊಟ್ಟಿದ್ದಾರೆ.
ಫೆಬ್ರವರಿ 27ರಿಂದ ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಆರಂಭವಾಗಲಿದ್ದು, ಕೆಂಗಲ್ ನಲ್ಲಿ ನಡೆದ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, ರಾಮನಗರದಲ್ಲಿ ಫೆಬ್ರವರಿ 27 ರಂದು ಬೆಳಿಗ್ಗೆ 9 ಗಂಟೆಗೆ ಮೇಕೆದಾಟು ಎರಡನೇ ಹಂತದ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. 5 ದಿನಗಳ ಕಾಲ ಯಾತ್ರೆ ನಡೆಯಲಿದೆ. ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.