ರಾಜ್ಯದಲ್ಲಿ ಉಪಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಾಜ್ಯದ ಘಟಾನುಘಟಿ ನಾಯಕರು ಸಿಂದಗಿ ಹಾಗೂ ಹಾನಗಲ್ನಲ್ಲಿ ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಿಜೆಪಿ ನಾಯಕರು ವೋಟಿಗಾಗಿ ಹಣವನ್ನು ಹಂಚುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹಾಗೂ ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕರು ಸಾಕ್ಷಿ ತೋರಿಸಿ ಎಂದು ಸವಾಲ್ ಎಸೆದಿದ್ದರು.
ಇದೀಗ ಈ ಸವಾಲಿಗೆ ಉತ್ತರ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಾಕ್ಷಿ ವಿಡಿಯೋ ಪೋಸ್ಟ್ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ದೊಡ್ಡ ಮಂತ್ರಿಗಳೇ ಚೀಲದಲ್ಲಿ ಹಣ ತಂದು ಹಂಚಿಕೆ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಬಳಿ ಸಾಕ್ಷಿಯ ವಿಡಿಯೋಗಳಿವೆ. ಇದನ್ನು ಪೋಸ್ಟ್ ಮಾಡುವಂತೆ ಈ ಮೂಲಕ ನಾನು ನಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡುತ್ತಿದ್ದೇನೆ ಎಂದು ಹೇಳಿದರು.
ಬಿಜೆಪಿ ಆಡಳಿತದ ವಿರುದ್ಧವೂ ಇದೇ ವೇಳೆ ಆಕ್ರೋಶ ಹೊರಹಾಕಿದ ಡಿಕೆಶಿ, ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ ವಚನಗಳನ್ನು ಉಳಿಸಿಕೊಂಡಿದೆಯೇ..? ರೈತರ ಆದಾಯವನ್ನು ಡಬಲ್ ಮಾಡುತ್ತೇವೆ ಎಂದು ಹೇಳಿದ್ದರು. ಹಾಗಾದರೆ ಈಗ ರೈತರ ಆದಾಯ ಡಬಲ್ ಆಗಿರಬೇಕು ಅಲ್ಲವೇ..? ನಾನು ರೈತರ ಬಳಿ ಹೋಗಿ ಕೇಳಿದೆ. ಅವರ ಆದಾಯ ಡಬಲ್ ಆಗೋದು ಹಾಗಿರಲಿ ಅವರ ಜೀವನವೇ ಗೊಬ್ಬರ ಆಗಿದೆ ಎಂದು ಆಕ್ರೋಶ ಹೊರಹಾಕಿದ್ರು.
ಉಪಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಟ್ರಬಲ್ ಶೂಟರ್, ಸಿಂದಗಿ ಹಾಗೂ ಹಾನಗಲ್ ಎರಡೂ ಕ್ಷೇತ್ರಗಳಲ್ಲಿಯೂ ಗೆಲುವು ನಮಗೇ ಲಭಿಸಲಿದೆ. ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ 25 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಲಿದೆ ಎಂದು ಹೇಳಿದ್ರು.