ಬೆಂಗಳೂರು: ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ.
ದಾರ್ಶನಿಕರು, ದೇಶಭಕ್ತರು, ಸಾಹಿತಿಗಳ ಪಠ್ಯ ಕೈಬಿಡಲಾಗಿದೆ. ಮತೀಯವಾದ ಪ್ರಚೋದಿಸುವ ವ್ಯಕ್ತಿಗಳ ಲೇಖನ ಅಳವಡಿಸಲಾಗಿದೆ. ಈ ಕುರಿತಂತೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಾಡಗೀತೆಗೆ ಅಪಮಾನಿಸಿದ ಸಮಿತಿ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.
ಪಠ್ಯದಲ್ಲಿ ಅಂಬೇಡ್ಕರ್, ಬುದ್ಧ ಬಸವಣ್ಣ, ನಾರಾಯಣಗುರು, ಸಾ.ರಾ. ಅಬೂಬಕರ್ ಅವರ ಪಾಠಗಳನ್ನು ತಿರುಚಲಾಗಿದೆ. ಮಹಿಳೆಯರನ್ನು ಕೀಳಾಗಿ ಚಿತ್ರಿಸಿದ ಪಾಠವನ್ನು ಸೇರ್ಪಡೆ ಮಾಡಲಾಗಿದೆ. ಪ್ರಾದೇಶಿಕವಾದ ಅಂದರೆ ದೇಶದ್ರೋಹ ಎಂದು ಬಿಂಬಿಸಲಾಗಿದೆ. ಇತಿಹಾಸಕ್ಕೆ ಕೋಮುದ್ವೇಷದ ಲೇಪನ ಹಚ್ಚಲಾಗಿದೆ. ಹೀಗಾಗಿ ಪಠ್ಯ ಪರಿಷ್ಕರಣೆ ಸಮಿತಿ ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೊಸ ಪಠ್ಯಪುಸ್ತಕ ಹಿಂಪಡೆದು ಹಳೆಪಠ್ಯ ಮುಂದುವರೆಸಬೇಕು ಎಂದು ಪತ್ರದ ಮೂಲಕ ಸಿಎಂಗೆ ಡಿಕೆಶಿ ಒತ್ತಾಯಿಸಿದ್ದಾರೆ.