alex Certify ಕ್ರಿಕೆಟ್ ನ್ನು ರಾಜಕಾರಣಿಗಳಿಂದ ದೂರವಿಡಿ; ಆಟಗಾರರೇ ಮುನ್ನಡೆಸಿ: ಡಿಸಿಎಂ ಡಿ. ಕೆ. ಶಿವಕುಮಾರ್ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ನ್ನು ರಾಜಕಾರಣಿಗಳಿಂದ ದೂರವಿಡಿ; ಆಟಗಾರರೇ ಮುನ್ನಡೆಸಿ: ಡಿಸಿಎಂ ಡಿ. ಕೆ. ಶಿವಕುಮಾರ್ ಸಲಹೆ

ಬೆಂಗಳೂರು: ಕ್ರಿಕೆಟ್ ಆಟವನ್ನು ರಾಜಕಾರಣಿಗಳಿಂದ ದೂರವಿಡಬೇಕು. ಕ್ರಿಕೆಟ್ ನ್ನು ಆಟಗಾರರೇ ಮುನ್ನಡೆಸಿಕೊಂಡು ಹೋಗಬೇಕು ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಸಲಹೆ ನೀಡಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ತಂಡದ ಮಾಜಿ ಆಟಗಾರ ಸಯ್ಯದ್ ಕಿರ್ಮಾನಿ ಅವರ 75ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಆತ್ಮ ಚರಿತ್ರೆ “ಸ್ಟಂಪಡ್ – ಲೈಫ್ ಬಿಯಾಂಡ್ ಅಂಡ್ ಬಿಯಾಂಡ್ ದಿ ಟ್ವೆಂಟಿ ಟು ಯಾರ್ಡ್ಸ್” ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕ್ರೀಡೆಗೆ ರಾಜಕಾರಣಿಗಳು ಅಪಾಯಕಾರಿ, ಹೀಗಾಗಿ ಕ್ರೀಡಾ ಚಟುವಟಿಕೆಗಳಿಂದ ಅವರನ್ನು ದೂರ ಇಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಪ್ರತಿಭೆ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಆ ಉನ್ನತ ಸ್ಥಾನವನ್ನು ಉಳಿಸಿಕೊಳ್ಳಲು ಒಳ್ಳೆಯ ಗುಣ ನಿಮಗೆ ಸಹಾಯ ಮಾಡುತ್ತದೆ. ಕಿರ್ಮಾನಿ ಅವರು ಈ ಎರಡೂ ಗುಣಗಳನ್ನು ಹೊಂದಿದ್ದಾರೆ. ಕಿರ್ಮಾನಿ ಅವರು ಕೇವಲ ಕ್ರಿಕೆಟ್ ಪ್ರತಿಭೆಯಷ್ಟೇ ಅಲ್ಲ, ಅತ್ಯುತ್ತಮ ವ್ಯಕ್ತಿತ್ವ ಇರುವವರು. ಕರ್ನಾಟಕ ಪ್ರತಿನಿಧಿಸುವ ಆಟಗಾರನಾಗಿ ಭಾರತೀಯ ಕ್ರಿಕೆಟ್ ಗೆ ದೊಡ್ಡ ಕೊಡುಗೆ ನೀಡಿದವರು ಕಿರ್ಮಾನಿ. ಶುದ್ಧ ಹೃದಯ ವಿಶ್ವದ ಶ್ರೇಷ್ಠ ದೇವಾಲಯ ಎಂದು ಹೇಳುತ್ತಾರೆ. ಕಿರ್ಮಾನಿ ಅವರು ಇಂತಹ ಶುದ್ಧ ಹೃದಯ ಹಾಗೂ ಮುಗುಳ್ನಗೆ ಹೊಂದಿರುವ ಹೃದಯವಂತ. ಇಂತವರು ಜಗತ್ತಿನಲ್ಲಿ ಬಹಳ ಅಪರೂಪ ಎಂದರು.

ನಾನಿಲ್ಲಿ ಡಿಸಿಎಂ ಆಗಿ ಬಂದಿಲ್ಲ. ಕಿರ್ಮಾನಿ ಅವರ ಅಭಿಮಾನಿಯಾಗಿ ಬಂದಿದ್ದೇನೆ. ನಾನು ಶಾಲೆಯಲ್ಲಿದ್ದಾಗ, ಚಂದ್ರಶೇಖರ್, ಜಿ.ಆರ್. ವಿಶ್ವನಾಥ್ ಹಾಗೂ ಕಿರ್ಮಾನಿ ಅವರ ಅಭಿಮಾನಿಯಾಗಿದ್ದೆ. ನೀವೆಲ್ಲರೂ ಸೇರಿ ನಮ್ಮ ರಾಜ್ಯ ಹಾಗೂ ದೇಶ ಹೆಮ್ಮೆಪಡುವಂತೆ ಸಾಧನೆ ಮಾಡಿದ್ದೀರಿ. ಇವರ ಜತೆಗೆ ಚಂದ್ರಶೇಖರ್, ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಅನೇಕರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕೆಎಸ್ ಸಿಎ ಕಾರ್ಯದರ್ಶಿಯಾಗಿದ್ದ ನಾಗರಾಜ್ ಅವರ ಪುತ್ರ ಹಾಗೂ ನಾನು ಒಂದೇ ಶಾಲೆಯಲ್ಲಿ ಓದುತ್ತಿದ್ದೆ. ಭಾರತ ಪಾಕಿಸ್ತಾನ ಪಂದ್ಯಗಳ ಟಿಕೆಟ್ ಪಡೆಯುತ್ತಿದ್ದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಕೆಎಸ್ ಸಿಎಗೆ ಪತ್ರ ಬರೆದು ನೂರಾರು ಟಿಕೆಟ್ ಪಡೆದು ನಮ್ಮ ಹುಡುಗರಿಗೆ ಹಂಚಿ ವಿದ್ಯಾರ್ಥಿ ನಾಯಕನಾಗಿದ್ದೆ. ಅಲ್ಲಿಂದ ನಾನು ಸುಮಾರು 10 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದೇನೆ ಎಂದರು.

ನೀವೆಲ್ಲರೂ ದೇಶಕ್ಕೆ ಕೊಡುಗೆ ನೀಡಿದ್ದೀರಿ. ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಧ್ಯಕ್ಷರಾಗುವಂತೆ ನಾರಾಯಣಸ್ವಾಮಿ ಅವರಿಗೆ ಹೇಳಿದ್ದೆವು. ಅವರು ನಮ್ಮ ಮನವಿ ಒಪ್ಪಿ ಆ ಜವಾಬ್ದಾರಿ ವಹಿಸಿಕೊಂಡರು. ಆಗ ರತನ್ ಟಾಟಾ ಅವರನ್ನು ಭೇಟಿ ಮಾಡಬೇಕಾಯಿತು. ಆಗ ಅವರು ಒಂದು ಮಾತು ಹೇಳಿದರು. ನೀವು ವೇಗವಾಗಿ ಸಾಗಬೇಕಾದರೆ ಒಬ್ಬರೇ ಸಾಗಿ, ನೀವು ದೂರ ಸಾಗಬೇಕಾದರೆ ಎಲ್ಲರೊಟ್ಟಿಗೆ ಸೇರಿ ಸಾಗಿ ಎಂದು ಹೇಳಿದರು. ಇದು ಕ್ರಿಕೆಟ್ ಗೂ ಅನ್ವಯವಾಗುತ್ತದೆ. ಎಲ್ಲಾ ಆಟಗಾರರು ಒಗ್ಗಟ್ಟಾಗಿ ಸಾಗಿದರೆ ಮಾತ್ರ ತಂಡ ತನ್ನ ಗುರಿ ಮುಟ್ಟುತ್ತದೆ.

ಆಗಿನ ಕಾಲದ ಆಟಗಾರರು ಈಗಿನ ಕಾಲದಂತೆ ಅತ್ಯುತ್ತಮ ತರಬೇತಿ ಕೇಂದ್ರಗಳನ್ನು ಹೊಂದಿರಲಿಲ್ಲ. ಆದರೂ ದೊಡ್ಡ ಮಟ್ಟಕ್ಕೆ ಬೆಳೆದು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಪ್ರತಿಭೆ ಇದ್ದರೆ ಉನ್ನತ ಸ್ಥಾನಕ್ಕೆ ಏರುತ್ತೇವೆ, ಆದರೆ ಆ ಸ್ಥಾನವನ್ನು ಕಾಯ್ದುಕೊಳ್ಳಬೇಕಾದರೆ ವ್ಯಕ್ತಿತ್ವ ಬಹಳ ಮುಖ್ಯ. ಇದಕ್ಕೆ ಕಿರ್ಮಾನಿ ಉತ್ತಮ ಉದಾಹರಣೆ. ಇಲ್ಲಿರುವ ಆಟಗಾರರೆಲ್ಲರೂ ಉತ್ತಮ ಬಾಂಧವ್ಯ ಹೊಂದಿದ್ದೀರಿ. ಕಪಿಲ್ ದೇವ್ ಅವರು ಹೇಳಿದಂತೆ, ಅನುಭವದ ಮುಂದೆ ಬೇರೇನೂ ಇಲ್ಲ. ಅನುಭವ ವ್ಯಕ್ತಿಯನ್ನು ಪಕ್ವವಾಗಿಸುತ್ತದೆ. ನಿಮ್ಮ ನಡುವಿನ ಬಾಂಧವ್ಯ ನೀರಿನಂತೆ. ಅದಕ್ಕೆ ಬಣ್ಣ, ರುಚಿ ಇಲ್ಲ. ಆದರೂ ಅದು ಬಹಳ ಮುಖ್ಯ. ನೀವು ಯಾವುದೇ ತಲೆಮಾರಿನವರಾಗಿರಿ, ಯಾವುದೇ ವಯೋಮಾನದವರಾಗಿರಿ, ಈ ಕ್ಷೇತ್ರದಲ್ಲಿ ನಿಮ್ಮ ಕೊಡುಗೆ ಹಾಗೂ ನೆನಪು ನಮಗೆ ಮಾದರಿಯಾಗಿದೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...