ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದ್ದು, ಪಕ್ಷದ ನಾಯಕ, ಹಾಲಿ ವಿಧಾನಪರಿಷತ್ ಸದಸ್ಯರಾದ ಎಸ್.ಆರ್. ಪಾಟೀಲ್ ಮತ್ತು ಮೈಸೂರಿನ ಧರ್ಮಸೇನ ಅವರಿಗೆ ಟಿಕೆಟ್ ಕೈ ತಪ್ಪಿದೆ.
ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ನಂತರ ಈ ಕುರಿತಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ನಮ್ಮ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಹೊರಗಿನವರಿಗೆ ಕಾಂಗ್ರೆಸ್ ಟಿಕೆಟ್ ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಸ್ಥಳೀಯ ನಾಯಕರು ಹೇಳಿದಂತೆ ನಾವು ಕೇಳಬೇಕಾಗುತ್ತದೆ. ರಾಜ್ಯಸಭೆ ಚುನಾವಣೆಯ ಸಂದರ್ಭದಲ್ಲಿ ನಾವು ಇದನ್ನು ಗಮನಿಸಿದ್ದೇವೆ. ಹೀಗಾಗಿ ಇದು ಅನಿವಾರ್ಯವೆಂದು ಹೇಳಿದ್ದಾರೆ.
ಎಸ್.ಆರ್. ಪಾಟೀಲ್ ಅವರನ್ನು ನಾವು ಕೈಬಿಡುವ ಪ್ರಶ್ನೆಯೇ ಇಲ್ಲ. ಪಾಟೀಲರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು. ಈ ವಿಚಾರವಾಗಿ ಬೇರೆ ರೀತಿ ತಂತ್ರಗಾರಿಕೆ ನಡೆಯುತ್ತಿದೆ. ಕೆಸಿ ಕೊಂಡಯ್ಯ ವಿಚಾರದಲ್ಲಿ ಶಾಸಕರಿಂದ ಅಭಿಪ್ರಾಯ ವ್ಯಕ್ತವಾಗಿದೆ. ಹೈಕಮಾಂಡ್ ಹೇಳಿದ್ದನ್ನು ನಾವು ಕೇಳಲೇಬೇಕು ಎಂದು ಹೇಳಿದ್ದಾರೆ.