ಬೆಂಗಳೂರು: ಐಟಿ, ಇಡಿ ದಾಳಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಸಿಬಿಐ ಶಾಕ್ ನೀಡಿದೆ. ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಕನಕಪುರ, ದೊಡ್ಡಆಲಹಳ್ಳಿ, ಸಂತೆಕೋಡಿಹಳ್ಳಿಯಲ್ಲಿ ಇರುವ ಮನೆ, ಜಮೀನುಗಳಲ್ಲಿ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಡಿ.ಕೆ. ಶಿವಕುಮಾರ್ ಗೆ ಸೇರಿದ ಆಸ್ತಿ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಇಡಿ ವಿಚಾರಣೆಗೆ ಡಿ.ಕೆ. ಶಿವಕುಮಾರ್ ಹಾಜರಾಗಿದ್ದರು. ಇಂದು ಕನಕಪುರದ ಡಿಕೆಶಿ ಮನೆಗೆ ಸಿಬಿಐ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯಲ್ಲಿದ್ದ ಕೆಲವು ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಸಿಬಿಐ ಅಧಿಕಾರಿಗಳ ತಂಡ ಡಿಕೆಶಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಮಹತ್ವದ ದಾಖಲೆಗಳ ಬಗ್ಗೆ ಮಾಹಿತಿ ಕೇಳಿ ದಾಖಲೆ ಪಡೆದುಕೊಂಡು ಹೋಗಿದ್ದಾರೆ. ಮನೆ, ಜಮೀನು ಮತ್ತಿತರ ಸ್ಥಳಗಳಿಗೆ ತೆರಳಿ ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಭೇಟಿಯ ವೇಳೆ ಕನಕಪುರ ತಹಶೀಲ್ದಾರ್ ಮತ್ತು ಪೊಲೀಸರು ಇದ್ದರು.
ಡಿ.ಕೆ. ಶಿವಕುಮಾರ್ ನಿವಾಸಗಳಿಗೆ ಭೇಟಿ ನೀಡಿ ಕೆಲವು ಮಹತ್ವದ ದಾಖಲೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ. ಸುಮಾರು ಒಂದು ಗಂಟೆ ಕಾಲ ನಿವಾಸದಲ್ಲಿ ಸಿಬಿಐ ಅಧಿಕಾರಿಗಳು ಇದ್ದರು. ಮಾಹಿತಿ ಪಡೆದು ತೆರಳಿದ್ದಾರೆ ಎನ್ನಲಾಗಿದೆ.