ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ಫಿಲಂ ಇನ್ಸ್ಟಿಟ್ಯೂಟ್ ಅಥವಾ ಸ್ಟುಡಿಯೋ ಆರಂಭಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಪುನೀತ್ ಅವರ ಹೆಸರಲ್ಲಿ ಚಿತ್ರರಂಗಕ್ಕೆ ಬರುವ ಹೊಸಬರಿಗೆ ಫಿಲಂ ಇನ್ಸ್ಟಿಟ್ಯೂಟ್ ಆರಂಭಿಸಬೇಕು. ಇಲ್ಲವೇ ಅವರ ಹೆಸರಲ್ಲಿ ಸ್ಟುಡಿಯೋ ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪುನೀತ್ ಅಭಿಮಾನಿಯಾಗಿ ವಿನಮ್ರತೆಯಿಂದ ಮನವಿ ಮಾಡುತ್ತೇನೆ ಎಂದಿದ್ದಾರೆ.
ಪುನೀತ್ ರಾಜಕುಮಾರ್ ಸೇವೆಯನ್ನು ಸ್ಮರಿಸಿದ ಅವರು, ಪುನೀತ್ ಅವರ ಸಾವಿನ ಸುದ್ದಿ ನಂಬಲಾಗಲಿಲ್ಲ. ಮನುಷ್ಯ ಹುಟ್ಟುವಾಗ ಉಸಿರು ಇರುತ್ತದೆ, ಹೆಸರು ಇರುವುದಿಲ್ಲ. ಮೃತಪಟ್ಟಾಗ ಹೆಸರು ಇರುತ್ತದೆ, ಉಸಿರು ಇರುವುದಿಲ್ಲ, ಪುನೀತ್ ಅವರಂತಹ ಸಾಮಾಜಿಕ ಬದ್ಧತೆ ಎಲ್ಲರಿಗೂ ಇರುವುದಿಲ್ಲ ಎಂದರು.