ಬೆಂಗಳೂರು: ನನ್ನ ಸ್ವತ್ತು ಯೋಜನೆಯಡಿ ನಗರದಲ್ಲಿನ ಎಲ್ಲಾ ಆಸ್ತಿಗಳ ಮಾಲೀಕರಿಗೆ ಡಿಜಿಟಲ್ ದಾಖಲೆ ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ಎಲ್ಲಾ ಆಸ್ತಿಗಳ ತೆರಿಗೆ ಪರಿಶೀಲನೆ ನಡೆಸಿ ವಾಸ್ತವದಲ್ಲಿರುವ ಕಟ್ಟಡಕ್ಕೆ ತೆರಿಗೆ ವಿಧಿಸಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಯೋಜನೆಯಲ್ಲಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಮಾಲೀಕರು ತೆರಿಗೆ ಪಾವತಿಸುತ್ತಿದ್ದು, ಶೇ. 50ಕ್ಕೂ ಅಧಿಕ ಕಟ್ಟಡಗಳ ತೆರಿಗೆ ಪಾವತಿಯಲ್ಲಿ ದೋಷವಿದೆ. ವಾಸ್ತವದಲ್ಲಿರುವ ಕಟ್ಟಡಗಳಿಗೆ ತೆರಿಗೆ ಪಾವತಿಸುತ್ತಿಲ್ಲ. ಹೀಗಾಗಿ ಡಿಜಿಟಲೀಕರಣ ಮಾಡಲಾಗುವುದು ಎಂದು ಹೇಳಿದ್ದಾರೆ.
ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಮಾಲೀಕರು ಕಟ್ಟಡದ ಅಳತೆಯನ್ನು ಕಡಿಮೆ ನೀಡಿದ್ದು, ಬಿಬಿಎಂಪಿಗೆ ವಾಸ್ತವದಲ್ಲಿ ಬರಬೇಕಿರುವ ಆಸ್ತಿ ತೆರಿಗೆ ಬರುತ್ತಿಲ್ಲ. ಹೀಗಾಗಿ, ಪಾಲಿಕೆಯಿಂದಲೇ ಎಲ್ಲಾ ಆಸ್ತಿಗಳನ್ನು ಪರಿಶೀಲಿಸಿ ವಾಸ್ತವ ಅಳತೆ ನಮೂದಿಸಲಾಗುವುದು. ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮಾಲೀಕರ ಮನೆಗೆ ತಲುಪಿಸಲಿದ್ದು, ನನ್ನ ಸ್ವತ್ತು ಯೋಜನೆ ಜಾರಿಗೊಳಿಸಲಾಗುವುದು. ಆಸ್ತಿಗಳ ತೆರಿಗೆ ಮರುಪರಿಶೀಲನೆ ನಡೆಸಲಾಗುವುದು ಹೊಸ ತೆರಿಗೆ ವಿಧಿಸುವುದಿಲ್ಲ. ವಾಸ್ತವದಲ್ಲಿ ಕಟ್ಟಡದ ಅಳತೆ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ಬ್ರಾಂಡ್ ಬೆಂಗಳೂರು ಮೂಲಕ ‘ನನ್ನ ಸ್ವತ್ತು’ ಯೋಜನೆಯಡಿ ಮನೆ ಬಾಗಿಲಿಗೆ ಆಸ್ತಿ ದಾಖಲೆ, ಮೊಬೈಲ್ ನಲ್ಲಿ ಮನೆ ನಿರ್ಮಾಣದ ನಕ್ಷೆ ಮಂಜೂರಾತಿ, ನಾಗರೀಕರ ನೇತೃತ್ವದಲ್ಲಿ ವಾರ್ಡ್ ಸಮಿತಿ, ಪಾರ್ಕ್ ಮತ್ತು ಕ್ರೀಡಾಂಗಣ ನಿರ್ವಹಣೆ, ಕಟ್ಟುನಿಟಿನ ತೆರಿಗೆ ಸಂಬಂಧ ಹೊಸ ತಂಡ ರಚನೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.