ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ‘ಭಾರತ್ ಜೋಡೋ’ ಯಾತ್ರೆ ಅಕ್ಟೋಬರ್ 3 ರಂದು ಕರ್ನಾಟಕ ಪ್ರವೇಶಿಸಲಿದೆ.
ರಾಜ್ಯ ನಾಯಕರು ಯಾತ್ರೆ ಯಶಸ್ಸಿಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯಾತ್ರೆಯ ಯಶಸ್ಸಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿವಿಧ ಸಮಿತಿಗಳನ್ನು ಹಾಗೂ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ವಸತಿ ಸಮಿತಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್, ಸೋಶಿಯಲ್ ಮೀಡಿಯಾ ಮುಖ್ಯಸ್ಥರಾಗಿ ಪ್ರಿಯಾಂಕ್ ಖರ್ಗೆ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಬಿ.ಎಲ್. ಶಂಕರ್ ಅವರನ್ನು ನೇಮಕ ಮಾಡಲಾಗಿದೆ.
7 ಲೋಕಸಭಾ ಕ್ಷೇತ್ರಗಳಿಗೆ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಚಾಮರಾಜನಗರ –ಧೃವನಾರಾಯಣ, ಮೈಸೂರು –ಡಾ.ಹೆಚ್.ಸಿ. ಮಹದೇವಪ್ಪ, ಮಂಡ್ಯ –ಎನ್. ಚೆಲುವರಾಯಸ್ವಾಮಿ, ತುಮಕೂರು –ಡಾ.ಜಿ. ಪರಮೇಶ್ವರ್, ಚಿತ್ರದುರ್ಗ, ದಾವಣಗೆರೆ -ಸಲೀಂ ಅಹಮದ್, ರಾಯಚೂರು -ಈಶ್ವರ್ ಖಂಡ್ರೆ, ಬಳ್ಳಾರಿ –ಎಂ.ಬಿ. ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.
ಈ ಪಟ್ಟಿಯಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರನ್ನು ನೇಮಿಸದಿರುವುದು ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಜನರನ್ನು ಕರೆತರುವ ಮತ್ತು ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ ಬಗ್ಗೆ ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಸೆ. 7 ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ‘ಭಾರತ್ ಜೋಡೋ ಯಾತ್ರೆ’ ಅಕ್ಟೋಬರ್ 3 ರಂದು ರಾಜ್ಯಕ್ಕೆ ಪ್ರವೇಶಿಸಲಿದ್ದು, ಅ. 19 ರವರೆಗೆ ರಾಜ್ಯದಲ್ಲಿ ಮುಂದುವರೆಯಲಿದೆ.