
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಡಿ.ಕೆ. ಶಿವಕುಮಾರ್ ಸೇರಿದಂತೆ ಹೆಲಿಕಾಪ್ಟರ್ ನಲ್ಲಿದ್ದ ಎಲ್ಲರೂ ಪಾರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್ ಅವರು, ಡಿ.ಕೆ. ಶಿವಕುಮಾರ್ ಪತ್ನಿಯ ಗ್ರಹ ಗತಿ ಚೆನ್ನಾಗಿರುವುದರಿಂದ ಡಿಕೆಶಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯ ಗುರುಬಲ, ಶನಿ ಬಲ ಎರಡೂ ಇಲ್ಲ. ಆದರೆ, ಅವರ ಪತ್ನಿ ಉಷಾ ಅವರ ಗ್ರಹ ಗತಿ ಚೆನ್ನಾಗಿದ್ದು, ಆ ದೈವ ಬಲ ಶಿವಕುಮಾರ್ ಅವರನ್ನು ಕಾಪಾಡುತ್ತಿದೆ ಎಂದು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಗೆ ಕುಕ್ಕಿದ ರಣ ಹದ್ದು ಮೃತಪಟ್ಟಿದೆ. ಹೀಗಾಗಿ ಪಂಚ ಪಕ್ಷಿ ಶಾಸ್ತ್ರ ಪರಿಣಿತ ಗಜೇಂದ್ರ ಅವರೊಂದಿಗೆ ಚರ್ಚೆ ನಡೆಸಿದ್ದು, ಶಾಸ್ತ್ರದ ಅನುಸಾರ ದೋಷ ಪರಿಹಾರಕ್ಕೆ ಬೆಂಗಳೂರಿನ ಅಲಸೂರಿನಲ್ಲಿರುವ ಸಾವಿರ ವರ್ಷ ಹಳೆಯ ಸೋಮೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ಮಾಡಿಸಬೇಕು. ಕುಕ್ಕೆ ಸುಬ್ರಹ್ಮಣ್ಯಕ್ಕೆ 22 ದಿನಗಳ ಒಳಗೆ ಭೇಟಿ ನೀಡಬೇಕು. ಘಟನೆಯನ್ನು ಹಗುರವಾಗಿ ಪರಿಗಣಿಸದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಡಿಕೆಶಿ ಮುನ್ನಡೆಯಬೇಕು ಎಂದು ರಾಜಗುರು ದ್ವಾರಕನಾಥ್ ಹೇಳಿದ್ದಾರೆ.