ಬೆಂಗಳೂರು: ಮುಸ್ಲಿಮರಿಗೆ ಮತದಾನದ ಹಕ್ಕು ತೆಗೆಯಬೇಕು ಎಂದು ಹೇಳಿಕೆ ನೀಡಿದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿದ್ದು ತಪ್ಪು. ಇದರಲ್ಲಿ ಯಾವ ದಾಕ್ಷಿಣ್ಯವೂ ಇಲ್ಲ ಎಂದು ಹೇಳಿದ್ದಾರೆ.
ಧರ್ಮಗಳು, ಜಾತಿಗಳು ಇದಕ್ಕೆಲ್ಲ ಮಧ್ಯಪ್ರವೇಶ ಮಾಡಬಾರದು. ಮತದಾನ ಸಂವಿಧಾನದ ಹಕ್ಕು. ಅವರು ತಪ್ಪು ಅರಿತು ಕ್ಷಮೆಯಾಚಿಸಿದ್ದು ಬಹಳ ಸಂತೋಷ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಅಶೋಕ್ ಬೆಂಕಿ ಹಚ್ಚಿ ಬೀಡಿ ಸೇದಲು ಹೊರಟಿದ್ದಾರೆ. ಸ್ವಾಮೀಜಿಗಳನ್ನು ಮುಟ್ಟಿದರೆ ನಾವು ಸುಮ್ಮನಿರಲ್ಲ ಅಂದಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ಕೇಸು ದಾಖಲಾದಾಗ, ಅವರು ಜಾಮೀನಿಗೆ ಪ್ರಯತ್ನಿಸಿದಾಗ, ಹತ್ತಾರು ವರ್ಷ ಪ್ರಕರಣ ನಡೆದಾಗ ಇದೇ ಅಶೋಕ ಎಲ್ಲಿದ್ದಾ? ಎಂದು ಪ್ರಶ್ನಿಸಿದ್ದಾರೆ.
ಚನ್ನಿಗಪ್ಪ ಕೈಯಲ್ಲಿ ಕೇಸು ಹಾಕಿಸಿದಾಗ ಅಶೋಕಣ್ಣ ಎಲ್ಲಿದ್ದ? ಆಗ ಸ್ವಾಮೀಜಿಯವರೇನು ತಪ್ಪು ಮಾಡಿರಲಿಲ್ಲ. ಆದರೂ ಅವತ್ತು ಜನತಾದಳ ಸರ್ಕಾರ ಕೇಸ್ ಹಾಕಿತ್ತು. ನಾನು ಕೂಡ ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದ್ದೇನೆ. ಎಲ್ಲಾ ಧರ್ಮಕ್ಕೂ ಗೌರವ ಕೊಡಬೇಕು. ಯಾರ ಹಕ್ಕಿನ ಬಗ್ಗೆಯೂ ಮಾತನಾಡುವುದು ಸೂಕ್ತವಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.