ಬೆಂಗಳೂರು: ನಿಗಮ – ಮಂಡಳಿ, ವಿವಿಧ ಸಮಿತಿಗಳ ಅಧ್ಯಕ್ಷರ ಹುದ್ದೆಗಳನ್ನು ಎರಡು ಅವಧಿಗೆ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಎಲ್ಲರನ್ನೂ ಪರಿಗಣಿಸಿ ನೇಮಕ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಎಷ್ಟು ಮತ ತಂದರು ಎಂಬುದನ್ನು ಸಹ ಮಾನದಂಡವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾ ಸಮಿತಿ, ತಾಲೂಕು ಸಮಿತಿ, ರಾಜ್ಯಮಟ್ಟದ ನಿರ್ದೇಶಕರ ಹುದ್ದೆ, ನಿಗಮ -ಮಂಡಳಿಗಳಿಗೆ ಅಧ್ಯಕ್ಷರು ಸೇರಿದಂತೆ ಹಲವು ಹುದ್ದೆಗಳಿಗೆ ಸಾಕಷ್ಟು ಅರ್ಜಿಗಳು ಬಂದಿದ್ದು, ಸಣ್ಣ ಪುಟ್ಟ ಹುದ್ದೆಗಳನ್ನು ಯಾರೂ ಕೇಳುತ್ತಿಲ್ಲ. ಅರ್ಜಿ ಪರಿಶೀಲನೆ ಮಾಡಿ ಬೂತ್ ಮಟ್ಟದಿಂದ ಎಷ್ಟು ಮತ ತಂದಿದ್ದಾರೆ ಎಂಬುದನ್ನು ಪರಿಗಣಿಸಿ ಸಾಮಾಜಿಕ ನ್ಯಾಯದಂತೆ ನಿಗಮ ಮಂಡಳಿಗಳಿಗೆ ಸ್ಥಾನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಶಾಸಕರು ತಮ್ಮ ಬೆಂಬಲಿಗರಿಗೆ ಹುದ್ದೆ ಕೊಡುವಂತೆ ಶಿಫಾರಸು ಮಾಡುತ್ತಾರೆ. ಪಕ್ಷಕ್ಕೆ ಹಿಂದಿನಿಂದ ದುಡಿದ ಕಾರ್ಯಕರ್ತತರು ಹಿಂದೆ ಬೀಳುತ್ತಾರೆ. ಇದರ ಬಗ್ಗೆ ವರಿಷ್ಠರರೊಂದಿಗೆ ಚರ್ಚಿಸಿ ಸರ್ಕಾರದ ಜೊತೆಗೆ ಪಕ್ಷಕ್ಕೆ ಬಲ ಬರುವಂತಾಗಲು ಕ್ರಮ ಕೈಗೊಳ್ಳಲಾಗುವುದು. ಎಲ್ಲರಿಗೂ ಏಕಕಾಲಕ್ಕೆ ನಿಗಮ ಮಂಡಳಿಗೆ ನೇಮಕಾತಿ ಮಾಡಲು ಆಗುವುದಿಲ್ಲ. ಮಹಿಳೆಯರು, ಯುವಕರು, ಸಾಮಾಜಿಕ ನ್ಯಾಯದಡಿ ಎಲ್ಲಾ ಸಮಾಜದವರು, ಪಕ್ಷಕ್ಕೆ ದುಡಿದವರನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ ಮಾಡುವುದಾಗಿ ಹೇಳಿದ್ದಾರೆ.