ಬೆಂಗಳೂರು ನಗರದ ಮೂಲೆ ಮೂಲೆಗೂ ಕಾವೇರಿ ನೀರನ್ನು ತಲುಪಿಸುವ ಮಹತ್ವಾಕಾಂಕ್ಷಿ ಕಾವೇರಿ ಐದನೇ ಘಟ್ಟದ ಯೋಜನೆಗೆ ದಸರಾ ಸಮಯದಲ್ಲಿ ಚಾಲನೆ ನೀಡಲಾಗುವುದು ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವರಾದ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಆ ಮೂಲಕ ಬೆಂಗಳೂರು ನಗರವನ್ನು ವಾಟರ್ ಸರ್‌ಪ್ಲಸ್ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಜನರಿಗೆ ಟ್ಯಾಂಕರ್ ಮೂಲಕ ನೀರು ಕೊಡುವುದನ್ನು ತಪ್ಪಿಸಿ ಮನೆ, ಮನೆಗೂ ಕುಡಿಯುವ ನೀರು ಹರಿಸುವುದು ನಮ್ಮ ಸಂಕಲ್ಪವಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿರುವ 110 ಹಳ್ಳಿಗಳಿಗೆ ಕಾವೇರಿ ನೀರು ನೀಡಲಾಗುವುದು. ಈಗಾಗಲೇ 1,400 ಎಂ.ಎಲ್.ಡಿ. ನೀರು ನೀಡುತ್ತಿದ್ದು, ಇದಕ್ಕೆ 775 ಎಂ.ಎಲ್.ಡಿ. ನೀರು ಸೇರ್ಪಡೆ ಮಾಡಲಿದ್ದು, ಕನಿಷ್ಠ 10 ವರ್ಷ ಬೆಂಗಳೂರಿನಲ್ಲಿ ಕುಡಿಯಲು ನೀರಿನ ತೊಂದರೆ ಆಗಬಾರದು ಎಂದು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
5 ನೇ ಹಂತ ಅನುಷ್ಠಾನದ ಬಳಿಕ 4 ಲಕ್ಷ ಹೊಸ ನೀರಿನ ಸಂಪರ್ಕ ನೀಡಲಾಗುತ್ತದೆ. 5 ಸಾವಿರ ಕೋಟಿ ಮೊತ್ತದಲ್ಲಿ 50 ಲಕ್ಷ ಜನರಿಗೆ ನೀರು ಒದಗಿಸುವ ದೇಶದ ದೊಡ್ಡ ಯೋಜನೆ ಇದಾಗಿದ್ದು. ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಜಪಾನ್ ಇಂಟರ್ ನ್ಯಾಷನಲ್ ಕೋ- ಆಪರೇಷನ್ ಏಜನ್ಸಿ ಜೊತೆ ಸಾಲದ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.