
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಪಾನಮತ್ತ ಯುವಕನೊಬ್ಬ ಕ್ಲಬ್ ಡಿಜೆ ಮೇಲೆ ನೋಡ ನೋಡುತ್ತಿದ್ದಂತೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಸೋಮವಾರ ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ರಾಂಚಿಯ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಕ್ಲಬ್ ನಲ್ಲಿ ಈ ಘಟನೆ ನಡೆದಿದ್ದು, ಯುವಕರ ಗುಂಪು ಇಲ್ಲಿಗೆ ಪಾರ್ಟಿ ಮಾಡಲು ಬಂದಿತ್ತು ಎನ್ನಲಾಗಿದೆ. ಡಾನ್ಸ್ ಮಾಡುವ ವೇಳೆ ಸಣ್ಣದಾಗಿ ಆರಂಭವಾದ ಗಲಾಟೆ ಬಳಿಕ ವಿಕೋಪಕ್ಕೆ ತಿರುಗಿದೆ.
ಕ್ಲಬ್ ನ ಡಿಜೆ ಸಂದೀಪ್ ಆಲಿಯಾಸ್ ಸ್ಯಾಂಡಿ ಹಾಗೂ ಅಲ್ಲಿನ ಸಿಬ್ಬಂದಿ ಯುವಕರ ಗುಂಪಿಗೆ ಬುದ್ಧಿ ಹೇಳಿ ಅಲ್ಲಿಂದ ಕಳುಹಿಸಿದ್ದು, ಇದರಿಂದ ಕೆರಳಿದ ಗುಂಪಿನಲ್ಲಿದ್ದ ಯುವಕರ ಪೈಕಿ ಒಬ್ಬನಾದ ಸಿಂಗ್ ಎಂಬಾತ ತನ್ನ ಟೀ ಶರ್ಟ್ ನಲ್ಲಿ ಗನ್ ಮರೆಮಾಡಿಕೊಂಡು ಬಂದು ಸ್ಯಾಂಡಿ ಮೇಲೆ ನೇರವಾಗಿ ಗುಂಡು ಹಾರಿಸಿದ್ದಾನೆ.
ಗುಂಡು ನೇರವಾಗಿ ಸ್ಯಾಂಡಿ ಎದೆಗೆ ಬಿದ್ದಿದ್ದು 4 – 5 ಹೆಜ್ಜೆ ಇಟ್ಟ ಆತ ಬಳಿಕ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪೊಲೀಸರು ಇದೀಗ ಆರೋಪಿ ಸಿಂಗ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಒರಿಸ್ಸಾ ಮೂಲದವನಾದ ಡಿಜೆ ಸಂದೀಪ್ ಕೇವಲ 20 ದಿನಗಳ ಹಿಂದಷ್ಟೇ ಇಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಇದೀಗ ಯುವಕನ ಹುಚ್ಚಾಟಕ್ಕೆ ಬಲಿಯಾಗಿದ್ದಾನೆ. ಘಟನೆಯ ದೃಶ್ಯಾವಳಿ ಕ್ಲಬ್ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.