ದೀಪಾವಳಿ ಎಂದರೆ ಬೆಳಕಿನ ಹಬ್ಬ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಈ ಹಬ್ಬದ ಸಂಭ್ರಮಕ್ಕೆ ಎಣೆಯೇ ಇಲ್ಲ. ಪಟಾಕಿ ಸಿಡಿತ, ಆಕಾಶಬುಟ್ಟಿ ಏರಿಸುವುದು, ಗೋಪೂಜೆ, ಹಿರಿಯರಿಗೆ ಪೂಜೆ ಸೇರಿದಂತೆ ಹತ್ತು ಹಲವು ಬಗೆಯ ವಿಶಿಷ್ಟಗಳು ಈ ಹಬ್ಬದಲ್ಲಿವೆ. ಆದರೆ ಇಲ್ಲೊಂದು ವಿಚಿತ್ರ ಆಚರಣೆ ಇದ್ದು, ಸ್ಮಶಾನದಲ್ಲಿ ದೀಪಾವಳಿ ಆಚರಿಸಲಾಗುತ್ತದೆ…!
ಕೇಳಿದರೆ ಅಚ್ಚರಿ ಎನ್ನಿಸುವ ಈ ಸಂಪ್ರದಾಯ ಇರುವುದು, ತೆಲಂಗಾಣದ ಕರೀಂನಗರದಲ್ಲಿ. ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿಯೂ ಈ ಸಂಪ್ರದಾಯವನ್ನು ಆಚರಿಸಲಾಗುತ್ತಿದೆ. ಕಳೆದ ಆರು ದಶಕಗಳಿಂದ ಸ್ಮಶಾನದಲ್ಲಿ ದೀಪಾವಳಿ ಆಚರಿಸುವ ಸಂಪ್ರದಾಯ ಇಲ್ಲಿದೆ. ಪೂರ್ವಜರನ್ನು ಸ್ಮರಿಸುತ್ತಾ ಕುಟುಂಬದ ಸದಸ್ಯರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಣೆಯನ್ನು ನಡೆಸಲಾಗುತ್ತದೆ.
ಕರೀಂನಗರದ ಕರ್ಜನ ಗಡ್ಡಾದಲ್ಲಿರುವ ಹಿಂದೂ ಸ್ಮಶಾನದಲ್ಲಿ ಪ್ರತಿ ವರ್ಷ ದಲಿತ ಕುಟುಂಬಗಳು ಸ್ಮಶಾನದಲ್ಲಿರುವ ತಮ್ಮ ಸಂಬಂಧಿಕರ ಸಮಾಧಿ ಬಳಿ ದೀಪಾವಳಿ ಆಚರಿಸುತ್ತಾರೆ. ಹಬ್ಬಕ್ಕೆ ಒಂದು ವಾರ ಮೊದಲು ಸ್ಮಶಾನವನ್ನು ಸ್ವಚ್ಛಗೊಳಿಸಿ ಸಮಾಧಿಗಳಿಗೆ ಬಣ್ಣ ಬಳಿಯುತ್ತಾರೆ. ಕುಟುಂಬದ ಸದಸ್ಯರೆಲ್ಲರೂ ಸಮಾಧಿಯ ಬಳಿಗೆ ಹೋಗಿ, ಸಮಾಧಿಗಳನ್ನು ಹೂವಿನಿಂದ ಅಲಂಕರಿಸುತ್ತಾರೆ.
ಹಬ್ಬದ ದಿನದಂದು, ಕುಟುಂಬದ ಸದಸ್ಯರೆಲ್ಲರೂ ಸಂಜೆ ಅಲ್ಲಿಯೇ ಕಳೆಯುತ್ತಾರೆ. ಅಲ್ಲಿಯೇ ದೀಪಾವಳಿಯನ್ನು ಆಚರಣೆ ಮಾಡುತ್ತಾರೆ. ತಮ್ಮ ಹಿರಿಯರಿಗೆ ನೈವೇದ್ಯ ಸಲ್ಲಿಸುವ ಮೂಲಕ ಅವರನ್ನು ಸ್ಮರಿಸುತ್ತಾರೆ. ಇದು ಸ್ವಲ್ಪ ವಿಚಿತ್ರ ಎನಿಸಿದರೂ ಸತ್ತವರ ನೆನಪುಗಳನ್ನು ನೆನೆದು ಹಬ್ಬ ಆಚರಿಸುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ.